ಉಡುಪಿ, ಜ 22(DaijiworldNews/MS): ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದಿಂದ ನೀಡಲಾಗುವ ಕುಂದೇಶ್ವರ ಸಮ್ಮಾನ್ -2022 ಪ್ರಶಸ್ತಿಗೆ ಯಕ್ಷಗಾನಗಂಧರ್ವ ರಾಘವೇಂದ್ರ ಮಯ್ಯ ಹಾಲಾಡಿ ಭಾಜನರಾಗಿದ್ದಾರೆ.
ಜ.23ರಂದು ಕುಂದೇಶ್ವರ ಕ್ಷೇತ್ರದ ಉತ್ಸವ ಸಂದರ್ಭ ಸಂಜೆ 6 ಗಂಟೆಗೆ ಸಾಂಕೇತಿಕವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಈ ಸಂದರ್ಭದಲ್ಲಿ ಕದ್ರಿ ಯಕ್ಷಕೂಟದವರಿಂದ ಯಕ್ಷಗಾನ ಬಯಲಾಟ ಸೇವೆ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.
ಯಕ್ಷಗಾನದಲ್ಲಿ ತನ್ನದೇ ಆದ ಶೈಲಿಯಿಂದ ಅಭಿಮಾನಿಗಳ ಸ್ನೇಹ-ವಿಶ್ವಾಸ-ಪ್ರೀತಿ ಗಳಿಸಿರುವ ಸ್ನೇಹಜೀವಿ-ಸರಳ ಸಜ್ಜನ ರಾಘವೇಂದ್ರ ಮಯ್ಯ ಹಾಲಾಡಿ ಅವರು ಶ್ರೀ ಕಾಳಿಂಗ ನಾವಡರ ನೆನಪಿನ ಜತೆಗೆ ಯಕ್ಷಮಾತೆಯ ಸೇವೆಯಲ್ಲಿ 4 ದಶಕಗಳಿಂದ ತೊಡಗಿಸಿಕೊಂಡಿದ್ದಾರೆ.
ತಮ್ಮ ಹದಿನೈದನೇ ವಯಸ್ಸಿನಲ್ಲಿ ರಂಗಸ್ಥಳದಲ್ಲಿ ಭಾಗವತರಾಗಿ ಹೊರಹೊಮ್ಮಿದರು.ಉಡುಪಿ ಜಿಲ್ಲೆ ಕುಂದಾಪುರದ ಹಾಲಾಡಿಯ ರಾಘವೇಂದ್ರ ಅವರು ಯಕ್ಷಗುರು ಪ್ರಾಚಾರ್ಯ ನಾರ್ಣಪ್ಪ ಉಪ್ಪೂರ ಅವರ ಯಕ್ಷಗಾನ ಪ್ರತಿಭೆಯಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಬಂದವರು. ಒಂಬತ್ತನೇ ತರಗತಿಯಲ್ಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಉಪ್ಪೂರ ಬಳಿ ಭಾಗವತಿಕೆ ತರಬೇತಿ ಪಡೆದರು. ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಭಾಗವತಿಕೆಯ ಮಟ್ಟು ತಿಟ್ಟುಗಳನ್ನು ಕಲಿತರು. ಮಯ್ಯ ಅವರು ಅಮೃತೇಶ್ವರಿ ಮೇಳದಲ್ಲಿ ಉಪ್ಪೂರರ ಜತೆ ಸಂಗೀತಗಾರನಾಗಿ ಸೇರಿ ತನ್ನ ಕಲಾಯಾನ ಶುರು ಮಾಡಿದರು.
ಬಯಲಾಟ ಮೇಳಗಳಲ್ಲಿಯೂ ನಿರಂತರ ಒಡನಾಟ ಕಾಪಾಡಿಕೊಂಡರು.
ರಾಘವೇಂದ್ರ ಮಯ್ಯ ಅವರ ಯಕ್ಷರಂಗದ ಯಾನಕ್ಕೆ ಈಗ 40ರ ಹರೆಯ.ಅವರ ಹಾಡಿದ ಪದ್ಯಗಳು ಎಷ್ಟೋ ಜನರ ಮೊಬೈಲ್ ರಿಂಗ್ಟೋನ್ಗಳಾಗಿರುವುದು ಅವರ ಜನಪ್ರಿಯತೆಗೆ ಸಾಕ್ಷಿ.