ಕಾರ್ಕಳ, ಜ 22(DaijiworldNews/MS): ಸ್ನೇಹಿತನೊಬ್ಬನ ಮುಖಕ್ಕೆ ಮಸಿಬಳಿದು ಕತ್ತಿಗೆ ಮಾಲೆ ಹಾಕಿ ತುಳುನಾಡ ಕಾರಣಿಕ ದೈವಾರಾಧನೆಗಳಲ್ಲಿ ಒಂದಾದ ಕೊರಗಜ್ಜನ ಪ್ರತಿರೂಪದಂತೆ ಪ್ರತಿಬಿಂಬಿಸಿ ವೇಷ ಹಾಕಿ ಹುಟ್ಟುಹಬ್ಬ ಆಚರಣೆ ನಡೆಸಿ ಅದರ ಫೋಟೋವನ್ನು ಸಾಮಾಜಿಕ ಜಾಲಗಳಲ್ಲಿ ವೈರಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸದಂತೆ, ಧಾರ್ಮಿಕ ಭಾವನೆಗೆ ನೋವು ಉಂಟುಮಾಡಿದ ನಾಲ್ವರ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಯಕ್ಷಗಾನದಲ್ಲಿ ಮೇಳವೊಂದರಲ್ಲಿ ದುಡಿಯುತ್ತಿದ್ದ ರವೀಂದ್ರ ಆಲಿಯಾಸ್ ರವಿಪೂಜಾರಿ ಪ್ರಕರಣದ ಪ್ರಮುಖ ಆರೋಪಿತ. ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ನಿವಾಸಿಯಾಗಿರುವ ಈತ ಯಕ್ಷಗಾನ ಮೇಳವೊಂದರಲ್ಲಿ ದುಡಿಯುತ್ತಿದ್ದಾನೆ. ಸಾಮಾಜಿಕ ಜಾಲದಲ್ಲಿ ಈತ ಫೋಟೋವೊಂದನ್ನು ಹರಿಬಿಟ್ಟಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಜನವರಿ ೧೬ರಂದು ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸಹೋದ್ಯೋಗಿಗಳು ಸೇರಿಕೊಂಡು ಸ್ನೇಹಿತನೊಬ್ಬನ ಹುಟ್ಟು ಹಬ್ಬ ಆಚರಿಸಿದ್ದಾರೆ. ಮುಖಕ್ಕೆ ಕರಿವೇಷ ಬಡಿದು ಕತ್ತಿಗೆ ಹೂವಿನ ಮಾಲೆ ಹಾಕಿ ಕುರ್ಚಿಯಲ್ಲಿ ಕುಳ್ಳಿರಿಸಿ ಇತರರು ಆತನ ಹಿಂಬದಿಯಲ್ಲಿ ನಿಂತು ಫೋಟೋಕ್ಕೆ ಫೋಸ್ ನೀಡಿದ್ದಾರೆ. ಅದರಲ್ಲಿ ಹಿಂಬದಿಯಲ್ಲಿ ಬಾಳೆ ಎಲೆ ಹಿಡಿದು ಫೋಸ್ ನೀಡದಾತನೇ ಹೊಸ್ಮಾರಿನ ರವೀಂದ್ರ ಎಂದು ತಿಳಿದುಬಂದಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಹೊಸ್ಮಾರಿನಲ್ಲಿರುವ ರವೀಂದ್ರನ ಮನೆಗೆ ಮುತ್ತಿಗೆ ಹಾಕಿದ್ದಾರೆ.
ಮಾಹಿತಿ ತಿಳಿದ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಹಾಗೂ ಸಿಬ್ಬಂದಿಯರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಂಘ ಪರಿವಾರದ ಕಾರ್ಯಕರ್ತರನ್ನು ಸಮಾಧಾನಿಸಿ ಘಟನಾ ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾರೆ.
ಸಂಘ ಪರಿವಾರದ ಮುಖಂಡ ಚೇತನ್ ನೀಡಿದ ದೂರಿನ್ವಯ ಪ್ರಕರಣ ಗಂಭೀರ ಸ್ವರೂಪಕ್ಕೆ ಸೂಚನೆಗಳು ಅರಿತುಕೊಂಡ ಪೊಲೀಸರು ಹೊಸ್ಮಾರಿನ ರವೀಂದ್ರ ಆಲಿಯಾಸ್ ರವಿಪೂಜಾರಿ ಹಾಗೂ ಆತನ ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.