ಮಂಗಳೂರು, ಜ 22(DaijiworldNews/MS): ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆ ಬಂದಿದ್ದ ತಾಯಿ ಮತ್ತು ಮಗು ಮೃತಪಟ್ಟ ಘಟನೆ ಜ.20 ರ ಶುಕ್ರವಾರ ನಡೆದಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ದೂರಿದ್ದಾರೆ.
ವಿಟ್ಲ ಮೂಲದ ಸವಿತಾ (33) ಎಂಬವರು ತುಂಬಾ ಗರ್ಭಿಣಿಯಾಗಿದ್ದು , ಹೆರಿಗೆಗಾಗಿ ಶುಕ್ರವಾರ ಬೆಳಗ್ಗೆ ಆಸ್ಪತ್ರೆಗೆ ಬಂದಿದ್ದರು. ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಸಂಜೆ ವೇಳೆ ತಾಯಿ ಕೂಡ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯವರು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಮೃತ ಮಹಿಳೆಯ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯ ಕಾರಣವಾಗಿದ್ದು ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ವೈದ್ಯರ ಜತೆ ಮಾತನಾಡುವಂತೆ ಸೂಚಿಸಿದ್ದೇನೆ. ಅವರು ವೈದ್ಯರೊಂದಿಗೆ ಮಾತನಾಡಿದ ಬಳಿಕ ನೀಡುವ ದೂರಿನಂತೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ