ಕಾಸರಗೋಡು, ಜ. 21 (DaijiworldNews/SM): ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿ ಸಮ್ಮೇಳನ ನಡೆಸಲಾಗುತ್ತಿದೆ ಎಂಬ ಆರೋಪ ಹಾಗೂ ಹೈಕೋರ್ಟ್ ನ ಆದೇಶದ ಹಿನ್ನಲೆಯಲ್ಲಿ ಸಿಪಿಎಂ ಕಾಸರಗೋಡು ಜಿಲ್ಲಾ ಸಮ್ಮೇಳನ ಶುಕ್ರವಾರ ರಾತ್ರಿ ಕೊನೆಗೊಂಡಿತು.
ಮೂರು ದಿನಗಳ ಸಮ್ಮೇಳನ ಶುಕ್ರವಾರ ಬೆಳಿಗ್ಗೆ ಆರಂಭಗೊಂಡಿತ್ತು. ಆದರೆ ಕೋವಿಡ್ ಮಾನದಂಡ ಹಿನ್ನಲೆಯಲ್ಲಿ ೫೦ಕ್ಕಿಂತ ಅಧಿಕ ಮಂದಿ ಪಾಲ್ಗೊಳ್ಳುವ ಸಮ್ಮೇಳನ ನಡೆಸುವುದರ ಬಗ್ಗೆ ವಿವಾದ ಉಂಟಾಗಿತ್ತು. ಗುರುವಾರ ಸಂಜೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಹೊರಡಿಸಿದ ಮಾರ್ಗಸೂಚಿಯಲ್ಲಿ ಜಿಲ್ಲೆಯಲ್ಲಿ ೫೦ಕ್ಕಿಂತ ಅಧಿಕ ಮಂದಿ ಪಾಲ್ಗೊಳ್ಳಲು ನಿರ್ಬಂಧ ಹೇರಲಾಗಿತ್ತು. ಇದಾದ ಬಳಿಕ ಎರಡು ಗಂಟೆಗಳ ಅವಧಿಯಲ್ಲಿ ಇನ್ನೊಂದು ಆದೇಶ ಹೊರಡಿಸಿ ಇಂತಹ ನಿರ್ಬಂಧ ಹೇರಲಾಗಿಲ್ಲ ಎಂದು ತಿಳಿಸಿದ್ದರು.
ಸಿಪಿಎಂ ಸಮ್ಮೇಳನದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ಹಿಂತೆಗೆದು ಕೊಂಡಿದ್ದು, ಜಿಲ್ಲಾಧಿಕಾರಿ ಸಿಪಿಎಂನ ವಕ್ತಾರರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಪ್ರತಿಪಕ್ಷ ದಿಂದ ಕೇಳಿಬಂತು.
ಈ ನಡುವೆ ಜಿಲ್ಲಾಧಿಕಾರಿರವರ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ತುರ್ತಾಗಿ ಕೈಗೆತ್ತಿಕೊಂಡ ಹೈಕೋರ್ಟ್ ಜಿಲ್ಲಾಧಿಕಾರಿರವರ ಆದೇಶ ಪ್ರಶ್ನಿಸಿ ೫೦ಕ್ಕಿಂತ ಅಧಿಕ ಮಂದಿ ಪಾಲ್ಗೊಳ್ಳುವ ಸಮ್ಮೇಳನ ನಡೆಸದಂತೆ ಆದೇಶ ನೀಡಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾ ಸಮ್ಮೇಳನವನ್ನು ಮೊಟಕುಗೊಳಿಸಲು ಸಿಪಿಎಂ ತೀರ್ಮಾನಿಸಿತು.