ಮಂಗಳೂರು, ಡಿ 07(SM): ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಎಸ್ ರಾವ್ ರಸ್ತೆಯ ಕಟ್ಟಡವೊಂದರಲ್ಲಿ ಅಕ್ರಮವಾಗಿ ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ನೊಂದ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಗುರುವಾರದಂದು ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಕ್ಲಾಸಿಕ್ ಆರ್ಕೆಡ್ ಕಟ್ಟಡದಲ್ಲಿ ದೀಪಂ ಆರ್ಯುವೇದಿಕ್ ಥೆರಫಿ ಸೆಂಟರ್ ಎಂಬ ಹೆಸರಿನ ಮಸಾಜ್ ಪಾರ್ಲರ್ ನಲ್ಲಿ ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಅದರಂತೆ ದಾಳಿ ನಡೆಸಿದ ತಂಡ ವೇಶ್ಯಾವಾಟಿಕೆ ವೃತ್ತಿಯನ್ನು ನಡೆಸುತ್ತಿದ್ದ ನೊಂದ ಮೂರು ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ.
ಈ ಮಸಾಜ್ ಪಾರ್ಲರ್ ನಲ್ಲಿ ಬಾಡಿ ಮಸಾಜ್ ಎಂಬ ಹೆಸರಿನಲ್ಲಿ ಯುವತಿಯರನ್ನು ಗಿರಾಕಿಗಳಿಗೆ ಒದಗಿಸಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿದ್ದರು ಎನ್ನಲಾಗಿದೆ. ಈ ಮಸಾಜ್ ಪಾರ್ಲರನ್ನು ನಡೆಸುತ್ತಿದ್ದ ಆರೋಪಿ ರೋಶನ್ ಎಂಬಾತ ದಾಳಿ ಸಮಯ ಪರಾರಿಯಾಗಿದ್ದಾನೆ ಎಂದು ದಾಳಿ ನಡೆಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಉತ್ತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುರೇಶ್ ಕುಮಾರ್ ಹಾಗೂ ಸಿಸಿಬಿ ಘಟಕದ ಪಿಎಸ್ಐ ಶ್ಯಾಮ್ ಸುಂದರ್, ಹೆಚ್.ಡಿ. ಕಬ್ಬಾಳ್ ರಾಜ್ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.