ಮಂಗಳೂರು, ಜ 20 (DaijiworldNews/MS): ಪೂಜೆ ಮಾಡಬೇಕೆಂದು ವ್ಯಕ್ತಿಯೊಬ್ಬರನ್ನು ಮನೆಗೆ ಕರೆಯಿಸಿ ಬಳಿಕ ಹನಿಟ್ರಾಪ್ ಮಾಡಿ 49 ಲಕ್ಷಕ್ಕೂ ಹೆಚ್ಚು ವಸೂಲಿ ಮಾಡಿದ ದಂಪತಿಗಳನ್ನು, ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮೂಲತಃ ಹಾಸನದ ಪ್ರಸ್ತುತ ಮಂಗಳೂರು ಮೇರಿಹಿಲ್ ನಿವಾಸಿ ಭವ್ಯ (30) ಮತ್ತು ಕುಮಾರ್ @ ರಾಜು (35) ಎಂದು ಗುರುತಿಸಲಾಗಿದೆ.
ನಗರದ ಪದವಿನಂಗಡಿನ ಬಾಡಿಗೆ ಮನೆಯಲ್ಲಿದ್ದ ದಂಪತಿಗಳು, ಚಿಕ್ಕಮಗಳೂರು ಜಿಲ್ಲೆಯ ವ್ಯಕ್ತಿಯೋರ್ವರನ್ನು ಭೇಟಿಯಾಗಿ ತಮ್ಮ ಮನೆಯಲ್ಲಿನ ದಾಂಪತ್ಯ ಸಮಸ್ಯೆಯನ್ನು ಬಗೆಹರಿಸಲು ಮನೆಯಲ್ಲಿ ಪೂಜೆಯನ್ನು ಮಾಡಿಕೊಡಬೇಕೆಂದು ಪುರೋಹಿತರರನ್ನು ಮನೆಗೆ ಕರೆಯಿಸಿಕೊಂಡಿದ್ದರು. ಮನೆಯಲ್ಲಿರುವ ಸಮಯ ಪುರೋಹಿತರ ಜೊತೆಗಿರುವ ಫೋಟೋ ಮತ್ತು ವೀಡಿಯೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹಾಗೂ ಜೀವ ಬೆದರಿಕೆ ಹಾಕಿ, ಬ್ಲಾಕ್ ಮೇಲ್ ಮಾಡಿ ಹಣದ ಬೇಡಿಕೆ ಇಟ್ಟು ರೂ 15 ಲಕ್ಷ ನಗದು ಹಣ ಹಾಗೂ ಸುಮಾರು 34 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದರು.
ಹಣಕ್ಕಾಗಿ ಪೊಲೀಸರ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರ, ಮಹಿಳಾ ಸಂಘಟನೆಗಳ ಹೆಸರಿನಲ್ಲಿ ಬೆದರಿಕೆ ಹಾಕಿರುವುದಲ್ಲದೇ ಇನ್ನಷ್ಟು ಹಣವನ್ನು ನೀಡದೇ ಇದ್ದರೆ ಸುದ್ದಿ ಮಾಧ್ಯಮಗಳಲ್ಲಿ ಫೋಟೋ ಮತ್ತು ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಆರೋಪಿಗಳ ಪೈಕಿ ಕುಮಾರ್ ನು ತನ್ನ ಹೆಸರನ್ನು ರಾಜು ಎಂದು ತಿಳಿಸಿ ಪ್ರಕರಣದಲ್ಲಿ ಮಧ್ಯವರ್ತಿಯಂತೆ ವರ್ತಿಸಿ , ಸಹಾಯ ಮಾಡುವ ನಿಟ್ಟಿನಲ್ಲಿ ಪ್ಲಾನ್ ಮಾಡಿಕೊಂಡು ಹಣ ವಸೂಲಿ ಮಾಡಿದ್ದರು.
ಈ ಸಂತ್ರಸ್ತ ವ್ಯಕ್ತಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹನಿಟ್ರಾಪ್ ಬಗ್ಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಕೈಗೊಂಡ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ಪಡೆದು ಈ ಕೃತ್ಯದಲ್ಲಿ ಭಾಗಿಯಾದ ದಂಪತಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಇತರ ಕೆಲವು ವ್ಯಕ್ತಿಗಳಿಗೆ ಇದೇ ರೀತಿ ಹನಿಟ್ಯ್ರಾಪ್ ಮಾಡಿ ಹಣ ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದ್ದು , ಈ ಬಗ್ಗೆ ತನಿಖೆ ಮುಂದುವರಿದ್ದಾರೆ.
ಹನಿಟ್ರಾಪ್ ಮಾಡಿ ಸುಲಿಗೆ ಮಾಡಿದ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನವನ್ನು ಸಾಗಿಸುತ್ತಿದ್ದರು. ಮೊದಲು ಸಣ್ಣ ಬಾಡಿಗೆ ಮನೆಯಲ್ಲಿದ್ದ ಆರೋಪಿಗಳು ಈ ಕೃತ್ಯವೆಸಗಿದ ನಂತರ ಸುಲಿಗೆ ಮಾಡಿದ ಹಣದಲ್ಲಿ ರೂ 10 ಲಕ್ಷ ಹಣವನ್ನು ನೀಡಿ ಫ್ಲಾಟ್ ವೊಂದನ್ನು ಲೀಸ್ ಗೆ ಪಡೆದುಕೊಂಡಿರುವುದಲ್ಲದೇ, ಈ ಫ್ಲಾಟ್ ಗೆ ಸುಮಾರು 7 ಲಕ್ಷ ಮೌಲ್ಯದ ಮನೆ ಸಾಮಾಗ್ರಿಗಳನ್ನು ಖರೀದಿಸಿದ್ದರು. ಅಲ್ಲದೇ ಹೊಸ ದ್ವಿಚಕ್ರ ವಾಹನವನ್ನು ಖರೀದಿಸಿದ್ದರು.
ಬಂಧಿತ ದಂಪತಿಗಳಿಂದ ರೂ 37,000 ಮೌಲ್ಯದ ಎರಡು 2 ಚಿನ್ನದ ರಿಂಗ್, ನಗದು ಹಣ ರೂ. 31,000/-ರೂ ಮತ್ತು 4 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ಜೊತೆ ಇತರರು ಕೂಡಾ ಭಾಗಿಯಾಗಿ ಹಣವನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ತನಿಖೆ ಮುಂದುವರಿಯುವುದು.
ಆರೋಪಿಗಳ ಪೈಕಿ ಭವ್ಯಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ 5 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿರುತ್ತದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐ ಯವರಾದ ರಾಜೇಂದ್ರ ಬಿ, ಪ್ರದೀಪ ಟಿ ಆರ್ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.