ಉಡುಪಿ, ಜ 20 (DaijiworldNews/MS): ಎನ್ಎಸ್ಯುಐ ರಾಜ್ಯ ಸಮಿತಿಯು ಶುಕ್ರವಾರ ಜ.21ರಂದು ಸರಕಾರಿ ಬಾಲಕಿಯರ ಪಿಯು ಕಾಲೇಜಿಗೆ ಭೇಟಿ ನೀಡಿ ಹಿಜಾಬ್ ವಿಚಾರವಾಗಿ ಮಾಹಿತಿಯನ್ನು ಕಲೆ ಹಾಕಿತು. ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ್ದರಿಂದ ಹಾಗೂ ಕಾಲೇಜಿನ ಪ್ರಮುಖ ದ್ವಾರವನ್ನೇ ಬಂದ್ ಮಾಡಿರುವುದನ್ನು ಗಮನಿಸಿ ಎನ್ ಎಸ್ ಯು ಐ ಪದಾಧಿಕಾರಿಗಳು ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ ಶತಾ ಬಿ ಶಿವಣ್ಣ, "ಇಂದು ನಾವು ಕಾಲೇಜಿಗೆ ಭೇಟಿ ನೀಡಲು ಪ್ರಾಂಶುಪಾಲರಿಂದ ಪೂರ್ವಾನುಮತಿಯನ್ನು ತೆಗೆದುಕೊಂಡಿದ್ದೆವು. ಆದರೆ ಇದ್ದಕ್ಕಿದ್ದಂತೆ ಕಾಲೇಜು ಆಡಳಿತ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ. ಹಿಜಾಬ್ ಧರಿಸಿದ ಕಾರಣಕ್ಕೆ ಸುಮಾರು 6-10 ವಿದ್ಯಾರ್ಥಿಗಳಿಗೆ ಕಾಲೇಜಿಗೆ ಪ್ರವೇಶ ನಿರಾಕರಿಸಿದ್ದಾರೆ.ಕಾಲೇಜಿಗೆ ಪ್ರವೇಶ ನಿರಾಕರಿಸುವುದು ಸಾಂವಿಧಾನಿಕವಾಗಿ ಸರಿಯಲ್ಲ. ಸಂವಿಧಾನದಲ್ಲಿ ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಧರಿಸಲು ಅವಕಾಶವಿದೆ. ಇದು ಮೂಲಭೂತ ಹಕ್ಕು.ಸಂವಿಧಾನವು ಇದಕ್ಕೆ ರಕ್ಷಣೆ ಯನ್ನು ಸಹ ಒದಗಿಸುತ್ತದೆ. ಆದರೆ ಕಾಲೇಜು ತಾರತಮ್ಯ ಮಾಡುತ್ತಿದೆ. ಕಾಲೇಜು ಧರ್ಮದ ಸ್ವಾತಂತ್ರ್ಯದ ಜೊತೆಗೆ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕೂಡಾ ಕಸಿದುಕೊಂಡಿದೆ. ಕೋವಿಡ್ ನಿಂದ ಶಿಕ್ಷಣಕ್ಕೆ ಈಗಾಗಲೇ ಅಡ್ಡಿಯಾಗಿದೆ. ಹಿಜಾಬ್ ಧರಿಸುವುದು ಮುಸ್ಲಿಂ ಧರ್ಮದ ಆಚರಣೆ ಎಂದು ಸುಪ್ರೀಂ ಕೋರ್ಟ್ ಮತ್ತು ಕೇರಳ ಹೈಕೋರ್ಟ್ ತೀರ್ಪುಗಳಿವೆ. ನಮ್ಮ ಹೋರಾಟವನ್ನು ಕಾನೂನು ರೀತಿಯಲ್ಲಿ ಮುಂದುವರಿಸುತ್ತೇವೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡುತ್ತೇವೆ ಈ ವಾರದೊಳಗೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು NSUI ಈ ವಿಚಾರದಲ್ಲಿ ಬೀದಿಗಿಳಿದು ಪ್ರತಿಭಟನೆಗೆ ಸಿದ್ಧ" ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಎನ್ಎಸ್ಯುಐ ಪ್ರಧಾನ ಕಾರ್ಯದರ್ಶಿ ಸುಹಾನ್ ಆಳ್ವ ಮಾತನಾಡಿ , ಈ ಒಂದು ಘಟನೆ ಪ್ರಾರಂಭವಾಗಿ 3 ವಾರಗಳು ಕಳೆದರೂ ರಾಜ್ಯ ಸರ್ಕಾರ ಈ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ?, ಸರ್ಕಾರ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುತ್ತಿದೆ, ಸರ್ಕಾರ ಎಲ್ಲರನ್ನು ಸಮಾನವಾಗಿ ಕಾಣಬೇಕು. ಆದರೆ ರಾಜ್ಯ ಸರ್ಕಾರದ ವಿಳಂಬ ನೀತಿಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. NSUI ಪ್ರಬಲ ಪ್ರತಿಭಟನೆಗೆ ಸಿದ್ಧ, ನಾವು ದೇಶದ ಕಾನೂನನ್ನು ಗೌರವಿಸುತ್ತೇವೆ, NSUI ಕಾನೂನು ಹೋರಾಟವನ್ನೂ ನಡೆಸುತ್ತದೆ, ವಿದ್ಯಾರ್ಥಿಗಳ ಪಾಲಕರಿಗೆ ಬೆದರಿಕೆ ಹಾಕಲಾಗುತ್ತಿದೆ. ಈ ವಿಷಯದ ಬಗ್ಗೆ ನಮಗೆ ಅನೇಕ ದೂರುಗಳು ಬಂದಿವೆ, ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವುದು ತಪ್ಪು , ಕಾಲೇಜು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುವ ದೇವಾಲಯವಾಗಿದೆ, ರಾಜಕೀಯ ಶಕ್ತಿಗಳು ಶಿಕ್ಷಣ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿವೆ," ಎಂದು ಅವರು ಹೇಳಿದರು.
ಈ ಸಂಧರ್ಭದಲ್ಲಿ ಎನ್ಎಸ್ಯುಐ ಉಡುಪಿ ಜಿಲ್ಲಾ ಅಧ್ಯಕ್ಷ ಸೌರಭ್ ಬಲ್ಲಾಳ್, ಉಪಾಧ್ಯಕ್ಷ ಜಮೀರ್ ಸುಹೇಲ್, ಎನ್ಎಸ್ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬೈಯಾಬೆ, ರಾಜ್ಯ ಎನ್ಎಸ್ಯುಐ ಪದಾಧಿಕಾರಿಗಳು ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.