ಕಾರ್ಕಳ, ಜ 20 (DaijiworldNews/MS): ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಟಿಪ್ಪರ್ ಚಲಾಯಿಸಿ ಓರ್ವನ ಸಾವಿಗೆ ಕಾರಣನಾದ ಪ್ರೆಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ 2ನೇ ಹೆಚ್ಚುವರಿ ಸಿ.ಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಧೀಶೆ ಚೇತನಾ ಎಸ್.ಎಫ್ ಅವರು ಪ್ರಕರಣದ ಆರೋಪಿಗಳಾಗಿದ್ದ ಟಿಪ್ಪರ್ ಚಾಲಕ ಹಾಗೂ ಮಾಲಕರು ತಪ್ಪಿತಸ್ಥ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದಾರೆ.
2015 ಅಕ್ಟೋಬರ್ 27ರಂದು ಸಂಜೆ ಸುಮಾರು 7 ಗಂಟೆಗೆ ಈ ಘಟನೆಯು ನಿಟ್ಟೆ ಗ್ರಾಮ ಪಂಚಾಯತ್ ಎದುರುಗಡೆ ಹಾದು ಹೋಗಿರುವ ಪ್ರಮುಖ ರಸ್ತೆಯ ತಿರುವಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡ್ಕೂರಿನ ಜಾಯ್ ಕ್ಯಾನೂಟ್ ಕುಟಿನ್ಹಾ ಒಂದನೇ ಆರೋಪಿಯಾಗಿದ್ದು ಈತ ಟಿಪ್ಪರ್ ಚಾಲಕನಾಗಿದ್ದಾನೆ. ಉಡುಪಿಯ ಸಾಂತೂರು ನಿವಾಸಿ ಪ್ರಾನ್ಸಿಸ್ ಟಿಪ್ಪರ್ ಮಾಲಕನಾಗಿದ್ದು, 2ನೇ ಆರೋಪಿತ ಎಂದು ಕಾರ್ಕಳದ ಅಂದಿನ ಪೊಲೀಸ್ ವೃತ್ತ ನಿರೀಕ್ಷಕ ಜಿ.ಎಂ.ನಾಯ್ಕರ್ ಕಾರ್ಕಳ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪಡುಬಿದ್ರಿಯಿಂದ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದ ಕೆ.20 7236 ನಂಬ್ರದ ಟಿಪ್ಪರ್ ಅದರ ಚಾಲಕ ಅತೀವೇಗವಾಗಿ ಸಾಗಿ ಬಂದು ನಿಟ್ಟೆ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ರಸ್ತೆಯ ಎಡಬದಿಗೆ ಏಕಾಏಕಿಯಾಗಿ ತಿರುಗಿಸಿರುವುದೇ ಈ ಘಟನೆಗೆ ಕಾರಣವಾಗಿದೆ. ಹಿಂಬದಿಯಲ್ಲಿ ಇದ್ದ ಎಂಹೆಚ್ ಡಿ೪ ಬಿಕೆ 3828 ನಂಬ್ರದ ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಕಾರಿನಲ್ಲಿ ಇದ್ದ ಶಿವಕುಮಾರ್ ಆಲಿಯಾಸ್ ಅಖಿಲ್ ತೀವ್ರ ತರದಲ್ಲಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆ ಕರೆದೊಯ್ಯುತ್ತಿದ್ದಾಗ ರಸ್ತೆಯಲ್ಲಿ ಸಾವಿಗೀಡಾಗಿದ್ದರು. ಕಾರಿನಲ್ಲಿ ಇದ್ದ ನಿತೀಶ್ ಹಾಗೂ ಗಂಗಾಧರ್ ಗಾಯಗೊಂಡಿದ್ದರು.
ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ ಅಪಘಾತಕ್ಕೀಡಾದ ಟಿಪ್ಪರ್ ಲಾರಿಗೆ ಪರ್ಮಿಟ್, ಅರ್ಹತಾ ಪತ್ರ, ಹೊಗೆ ತಪಾಸಣಾ ಪ್ರಮಾಣ ಪತ್ರ ಇರಲಿಲ್ಲ. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು ವಾದ-ಪ್ರತಿವಾದ ಆಲಿಸಿ ಆರೋಪಿತರು ಅಪರಾಧಿಗಳೆಂದು ಫೋಷಿಸಿ ಆರೋಪಿತರಿಗೆ ಶಿಕ್ಷೆ ಪ್ರಮಾಣವನ್ನು ವಿಧಿಸಿದ್ದಾರೆ. ಸರಕಾರಿ ಪರವಾಗಿ ಈ ಹಿಂದಿನ ಸರಕಾರ ಪರ ಸಹಾಯಕ ಸರಕಾರಿ ಅಭಿಯೋಜಕರಾಗಿದ್ದ ಜಗದೀಶ್ಕೃಷ್ಣ ಜಾಲಿ ಪ್ರಕರಣದ ಸಾಕ್ಷಿದಾರರ ವಿಚಾರಣೆಯನ್ನು ಮಂಡಿಸಿದ್ದರು. ನಂತರದಲ್ಲಿ ಸರಕಾರ ಪರ ಸಹಾಯಕ ಸರಕಾರಿ ಅಭಿಯೋಜಕರಾದ ಶೋಭಾ ಮಹಾದೇವ ವಾದ ಮಂಡಿಸಿದರು.
ಒಂದನೇ ಆರೋಪಿಗೆ ಕಲಂ 279,337,228 ಭಾರತೀಯ ದಂಡ ಸಂಹಿತೆಯ ಅಪರಾಧಕ್ಕೆ ಸಂಬಂಧಿಸಿ ಕ್ರಮವಾಗಿ ರೂ.1000 ದಂಡ, ರೂ.500 ದಂಡ, ರೂ.1000 ದಂಡ ಪಾವತಿಸಬೇಕು. ತಪ್ಪಿದಲ್ಲಿ ಒಂದು ತಿಂಗಳ ಸಾದಾ ಸಜೆ. 15 ದಿನಗಳ ಸಾದಾ ಸಜೆ, ಒಂದು ತಿಂಗಳ ಸಾದಾ ಸಜೆ ಅನುಭವಿಸತಕ್ಕದು. ಕಲಂ 304(ಎ) ಭಾರತೀಯ ದಂಡ ಸಂಹಿತೆಯ ಅಪರಾಧಕ್ಕೆ ಸಂಬಂಧಿಸಿದಂತೆ 6ತಿಂಗಳ ಸಾದಾ ಕಾರಗೃಹ ವಾಸದ ಶಿಕ್ಷೆ ಮತ್ತು ರೂ.5,000ದಂಡ ವಿಧಿಸಲಾಗಿರುತ್ತದೆ.
2ನೇ ಆರೋಪಿಗೆ ಸಿಎಂವಿ ರೂಲ್ 52 ಸಹವಾಚಕ ಕಲಂ 190(2) ಐಎಂವಿ ಕಾಯಿದೆಯಡಿ ಅಪರಾಧಕ್ಕೆ, ಸಿಎಂವಿ ರೂಲ್ 56 ಸಹವಾಚಕ ಕಲಂ 177 ಐಎಂವಿ ಕಾಯಿದೆ ಮತ್ತು ಕಲಂ 81 ಸಹವಾಚಕ ಕಲಂ 192 ಐಎಂವಿ ಕಾಯಿದೆಯಡಿ ಅಪರಾಧಗಳಿಗೆ ಸಂಬಂಧಿಸಿ 2ನೇ ಆರೋಪಿಗೆ ಕ್ರಮವಾಗಿ ರೂ.1000,ರೂ.500,ರೂ.5000 ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ದಂಡ ತೆರಲು ತಪ್ಪಿದಲ್ಲಿ 2ನೇ ಆರೋಪಿಯು ಕ್ರಮವಾಗಿ 1 ತಿಂಗಳ ಸಾದಾ ಕಾರಗೃಹ ವಾಸದ ಶಿಕ್ಷೆ 15 ದಿನಗಳ ಸಾದಾ ಕಾರಗೃಹ ವಾಸದ ಶಿಕ್ಷೆ ಮತ್ತು 6 ತಿಂಗಳ ಸಾದಾ ಕಾರಗೃಹ ವಾಸದ ಶಿಕ್ಷೆಯನ್ನು ವಿಧಿಸಿ ತೀ್ಪು ನೀಡಿದ್ದಾರೆ.