ಮಂಗಳೂರು, ಜ 21 (DaijiworldNews/HR): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣಕ್ಕೆ ಎರಡು ವರ್ಷಗಳಾಗಿದ್ದು, ಕೊರೊನಾ ಸೋಂಕಿನಿಂದ ನಿಧಾನಗತಿಯಲ್ಲಿದ್ದ ವಿಚಾರಣೆ ಇದೀಗ ಬಹುಪಾಲು ಪೂರ್ಣ ಗೊಂಡಿದೆ. ಪ್ರಕರಣದ ಆರೋಪಿ ಆದಿತ್ಯ ರಾವ್ (39) ನಗರದ ಸಬ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಆರೋಪಿ ಆದಿತ್ಯ ಕೆಲವು ವಿಚಾರಣೆಗಳಿಗೆ ಖುದ್ದಾಗಿಯೂ ಇನ್ನೂ ಕೆಲವಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕವೂ ಹಾಜರಾಗಿದ್ದು, ತನಿಖಾ ಧಿಕಾರಿಯ ವಿಚಾರಣೆ ಮತ್ತು ಹೇಳಿಕೆ ಪಡೆಯಲು ಬಾಕಿ ಇದೆ. ಕೊರೊನಾ 2ನೇ ಅಲೆಯ ಕಾರಣ ಸ್ವಲ್ಪ ವಿಳಂಬವಾಗಿದೆ. ಆದಿತ್ಯ ತನ್ನ ಪರವಾಗಿ ಯಾವುದೇ ವಕೀಲರನ್ನು ನೇಮಿಸಿಕೊಂಡಿಲ್ಲ. ಸರಕಾರಿ ವಕೀಲರನ್ನು ನೇಮಿಸಲು ಅವಕಾಶ ನೀಡಿದ್ದರೂ ನಿರಾಕರಿಸಿದ್ದಾನೆ ಎನ್ನಲಾಗಿದೆ.
ಇನ್ನು 2020ರ ಜ. 20ರಂದು ಬೆಳಗ್ಗೆ ಆರೋಪಿ ಆದಿತ್ಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ನ ಟಿಕೆಟ್ ಕೌಂಟರ್ ಬಳಿ ಪ್ರಯಾಣಿಕರು ಕುಳಿತುಕೊಳ್ಳುವ ಕುರ್ಚಿಯಲ್ಲಿ ಬಾಂಬ್ ಇರುವ ಬ್ಯಾಗ್ ಇರಿಸಿ ಬಳಿಕ ಪಾರ್ಕಿಂಗ್ ಪ್ರದೇಶದಲ್ಲಿದ್ದ ಆಟೋ ರಿಕ್ಷಾ ಏರಿ ಹೋಗಿದ್ದು, ಅನುಮಾನಾಸ್ಪದ ಬ್ಯಾಗನ್ನುಕಂಡ ನಿಲ್ದಾಣದ ಅಧಿಕಾರಿಗಳು ತಜ್ಞರಿಂದ ಪರಿಶೀಲನೆಗೆ ಒಳಪಡಿಸಿದಾಗ ಸ್ಫೋಟಕ ಪತ್ತೆಯಾಗಿತ್ತು. ಬಳಿಕ ಕೆಂಜಾರಿನ ನಿರ್ಜನ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಲಾಗಿತ್ತು.
ಆರೋಪಿ ಬೆಂಗಳೂರಿಗೆ ತೆರಳಿ ಜ. 22ರಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದನು. ಹಲಸೂರು ಗೇಟ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು. ಮಂಗಳೂರಿನ ಪೊಲೀಸರು ಬೆಂಗಳೂರಿಗೆ ತೆರಳಿ ಮಂಗಳೂರಿಗೆ ಕರೆ ತಂದಿದ್ದರು.
ಇನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮಂಗಳೂರು ಪೊಲೀಸರು ಪುನಃ ಕಸ್ಟಡಿಗೆ ಪಡೆದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ಎರಡು ವರ್ಷಗಳಿಂದ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.