ಧರ್ಮಸ್ಥಳ, ಡಿ 07 ( MSP) : ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಲಕ್ಷದೀಪೋತ್ಸವದ ಸ್ವಸಹಾಯ ಸಂಘಗಳ ಮಳಿಗೆಯಲ್ಲಿ ಅಡಿಕೆ ಹಾಳೆಗಳ ಟೊಪ್ಪಿಗಳು (ಮುಟ್ಟಾಳೆ) ಗಮನಸೆಳೆದಿದೆ. ಕರಾವಳಿಯ ವಿಶಿಷ್ಟ ಸಂಪ್ರದಾಯವನ್ನು ಬಿಂಬಿಸುವ ಹಾಳೆಟೊಪ್ಪಿಗಳನ್ನು ಖರೀದಿಸಿದ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಬಾಬು ನಲಿಕೆ ಈ ಅಳಿವಿನಂಚಿನಲ್ಲಿರುವ ಕಾರ್ಯದಲ್ಲಿ ತೊಡಗಿಕೊಂಡವರು. ಎಪ್ಪತ್ತರ ಇಳಿವಯಸ್ಸಿನಲ್ಲೂ ವಂಶಪರಂಪರಾಗತವಾಗಿ ಬಂದ ಹಾಳೆ ಟೊಪ್ಪಿಯನ್ನು ಸ್ಥಳದಲ್ಲೇ ತಯಾರಿಸಿ ಮಾರುತ್ತಿದ್ದಾರೆ.
ದೈವಾರಾಧನೆ ಕಲಾವಿದರಾಗಿರುವ ಬಾಬು ನಲಿಕೆ ಧರ್ಮಸ್ಥಳದ ನವಜೀವನ ಸಂಸ್ಥೆಯ ಸದಸ್ಯರು. ಸಂಸ್ಥೆಯ ಫಲಾನುಭವಿಯಾಗಿ ಕಳೆದ 30 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಕೂಲಿ ಮತ್ತು ಇನ್ನಿತರ ಚಿಕ್ಕ ಪುಟ್ಟ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು ಟೊಪ್ಪಿಗಳನ್ನು ತಯಾರಿಸುತ್ತಿದ್ದಾರೆ.
ಬಿಡುವಿನ ವೇಳೆಯಲ್ಲಿ ಮನೆಯಲ್ಲೇ ಕುಳಿತು ಹಾಳೆಯಿಂದ ಟೊಪ್ಪಿ ತಯಾರಿಸುತ್ತಾರೆ. ದಿನಕ್ಕೆ ಹೆಚ್ಚೆಂದರೆ ಇಪ್ಪತ್ತು ಟೊಪ್ಪಿಗಳು ತಯಾರಾಗುತ್ತವೆ. ನೂರು ಅಡಿಕೆ ಹಾಳೆಗಳಿಗೆ 50 ರೂಪಾಯಿಯಂತೆ ಸ್ಥಳೀಯ ಅಡಿಕೆ ಕೃಷಿಕರಿಂದ ಹಾಳೆಗಳನ್ನು ಖರೀದಿಸುತ್ತಾರೆ. ಒಂದು ಹಾಳೆಯಿಂದ ಒಂದು ಟೊಪ್ಪಿಯನ್ನು ಮಾತ್ರ ತಯಾರಿಸಬಹುದು.
ಸಾಮಾನ್ಯ ದಿನಗಳಲ್ಲಿ ಬೇರೆ ಬೇರೆ ಊರುಗಳಿಂದಲೂ ಟೊಪ್ಪಿಗಾಗಿ ಬೇಡಿಕೆ ಬರುತ್ತದೆ. ಒಂದು ಟೊಪ್ಪಿ ಆರು ತಿಂಗಳು ಬಾಳಿಕೆ ಬರುತ್ತದೆ. ೫೦ ರೂಪಾಯಿಗೆ ಒಂದರಂತೆ ಮಾರಾಟ ಮಾಡುತ್ತೇನೆ. ಲಕ್ಷದೀಪೋತ್ಸವದಲ್ಲಿ ದಿನಕ್ಕೆ ಸರಾಸರಿ 20 ಟೊಪ್ಪಿಗಳು ಮಾರಾಟವಾಗುತ್ತಿವೆ ಎಂದು ಅವರು ಹೇಳಿದರು.
ಅಡಿಕೆ ಹಾಳೆಗಳ ಟೊಪ್ಪಿಗಳನ್ನು ತಯಾರಿಸುವುದು ಸಂಪೂರ್ಣ ನೈಸರ್ಗಿಕ ಕ್ರಿಯೆಯಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಇತರ ಟೊಪ್ಪಿಗಳಿಗಿಂತ ಹೆಚ್ಚು ತಂಪು ನೀಡುತ್ತದೆ ಎಂದು ನಲಿಕೆಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ: ಗುರುಗಣೇಶ ಭಟ್ ಡಬ್ಗುಳಿ