ಉಡುಪಿ, ಜ. 20 (DaijiworldNews/SM): ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ಅವೈಜ್ಞಾನಿಕ ಹಾಗೂ ಅನೈತಿಕ ಎಂದು ದ.ಕ. ಹಾಗೂ ಉಡುಪಿ ಜಿಲ್ಲೆಯ ವರ್ತಕರ ಸಂಘ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡರು, ಈ ವಾರದಿಂದ ವಾರಂತ್ಯ ಕರ್ಫ್ಯೂ ರದ್ದುಗೊಳಿಸದೇ ಹೋದಲ್ಲಿ ನಾವು ಸರಕಾರದ ನಿಯಮಗಳನ್ನು ಮೀರಿ ಅಂಗಡಿ ಮುಂಗಟ್ಟುಗಳನ್ನು ತೆರೆಯುತ್ತೇವೆ. ಸರಕಾರ ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಪರವಾಗಿಲ್ಲ. ಅದನ್ನು ನಾವು ಎದುರಿಸುತ್ತೇವೆ ಎಂದು ವರ್ತಕರ ಸಂಘ ಸವಾಲೆಸೆದಿದೆ.
ವಾರಾಂತ್ಯ ಕರ್ಫ್ಯೂ ಅವೈಜ್ಞಾನಿಕ ಮತ್ತು ಅನೈತಿಕವಾಗಿದೆ. ರಾಜ್ಯದೆಲ್ಲೆಡೆ ರಾಜಕೀಯ ಪಕ್ಷಗಳು ಸಭೆ ಸಮಾರಂಭಗಳನ್ನು ರ್ಯಾಲಿಗಳನ್ನು ನಡೆಸುತ್ತಿವೆ. ಅಲ್ಲದೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ರಾಜ್ಯದಲ್ಲಿ ನಡೆಯುತ್ತಿವೆ. ಅಲ್ಲಿ ಸೋಂಕು ಹರಡುವುದಿಲ್ಲವೇ ಎಂದು ಪ್ರಶ್ನಿಸಿರುವ ವರ್ತಕರು, ಹಾಗಿದ್ದಾಗ ವಾರಾಂತ್ಯ ಕರ್ಫ್ಯೂ ಯಾವ ಕಾರಣಕ್ಕೆ ಜಾರಿಗೊಳಿಸಲಾಗಿದೆ. ಸರಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ನೀಡುವ ತಂತ್ರ ಅನುಸರಿಸುತ್ತಿದೆ ಎಂದು ವರ್ತಕರ ಸಂಘ ಆರೋಪಿಸಿದೆ.