ಉಡುಪಿ, ಜ 20 (DaijiworldNews/MS): ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿನ ಸ್ಕಾರ್ಫ್ ವಿವಾದ ಕಳೆದ ಮೂರು ವಾರಗಳಿಂದಲೂ ಬಗೆಹರಿದಿಲ್ಲ.ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ತಮ್ಮ ಬೇಡಿಕೆ ಸಡಿಲಗೊಳಿಸದೆ , ಹಿಜಾಬ್ ಧರಿಸುವ ಹಕ್ಕಿದೆ ಎಂದು ಪಟ್ಟು ಹಿಡಿದಿದ್ದಾರೆ.
ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ಇಲ್ಲದ ಹಿನ್ನಲೆ ಕಾಲೇಜಿನ ಮುಂಭಾಗದಲ್ಲಿ ಸ್ಕಾರ್ಫ್ ವಿವಾದದ ಕುರಿತು ಗುರುವಾರ ಮಾಧ್ಯಮದೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಆಲಿಯಾ ಅಸಾದಿ, "ನಮಗೆ ಶಿಕ್ಷಣವು ಬೇಕು, ನಮ್ಮ ಹಿಜಾಬ್ ಕೂಡ ಬೇಕು. ಪ್ರಥಮ ವರ್ಷ ಹಿಜಾಬ್ ಹಾಕಲು ಪೋಷಕರು ಬಂದು ಮಾತನಾಡಿದ್ದರು. ಆದರೆ ಅನುಮತಿ ನೀಡಿಲ್ಲ. ನಮ್ಮ ಸಮವಸ್ತ್ರದ ಶಾಲಿನಿಂದಲೇ ಸ್ಕಾರ್ಫ್ ಹಾಕಲು ತಯಾರಿದ್ದೇವೆ. ಅದಕ್ಕೂ ಒಪ್ಪಿಗೆ ನೀಡಿಲ್ಲ. ನಂತರ ಲಾಕ್ ಡೌನ್ ಆಯಿತು, ದ್ವಿತೀಯ ವರ್ಷ ಭೌತಿಕ ತರಗತಿ ಆರಂಭ ಆದಾಗ ಮತ್ತೆ ಈ ಗೊಂದಲ ಆರಂಭ ಆಗಿದೆ. ಮೂರು ವಾರಗಳು ಇದೇ ರೀತಿ ಕಳೆದು ಹೋಯ್ತು. ಒಟ್ಟಾರೆಯಾಗಿ ನ್ಯಾಯ ಒದಗಿಸಬೇಕು. ನಾವು ತರಗತಿ ಹಾಜರಾಗಲು ಅನುವು ಮಾಡಿಕೊಡಬೇಕು " ಎಂದು ಆಗ್ರಹಿಸಿದ್ದಾರೆ.
"ಹಿಜಾಬ್ ಹಾಕುವುದು ನಮ್ಮ ಸಂಪ್ರದಾಯ,ಮೊದಲಿನಿಂದಲೂ ಹಿಜಾಬ್ ಧರಿಸಿದರೆ ಕಾಲೇಜು ಆಡಳಿತದಿಂದಲೇ ದೌರ್ಜನ್ಯ ನಡೆಸಲಾಗುತ್ತಿದೆ. ಇದೇ ವಿಚಾರವಾಗಿ ಹಲವು ದಿನಗಳಿಂದ ಮಾನಸಿಕ ಹಿಂಸೆ ನೀಡುತ್ತಿದ್ದಾರೆ.ವಾರದಲ್ಲಿ ನಾಲ್ಕೈದು ಬಾರಿ ಪೋಷಕರ ಸಭೆ ಕರೆಯುತ್ತಾರೆ. ಎಲ್ಲರೂ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ತರಗತಿ ಗೈರು ಹಾಜರಾಗಿದ್ದಕ್ಕೆ ಅನಾರೋಗ್ಯದ ಬಗ್ಗೆ ಕಾರಣ ಹಾಕಿ ಪತ್ರ ಬರೆಸಿದ್ದಾರೆ. ಇದನ್ನು ನಾವು ಒಪ್ಪುವುದಿಲ್ಲ" ಎಂದು ವಿದ್ಯಾರ್ಥಿನಿ ಆಲಿಯಾ ಬಾನು ಆರೋಪಿಸಿದ್ದಾರೆ.
ಇದೇ ವೇಳೆ ಐವರು ವಿದ್ಯಾರ್ಥಿನಿಯರು, ಹಿಜಾಬ್ ಧರಿಸುವ ಹಕ್ಕಿನ ಬಗ್ಗೆ ಕಾಲೇಜು ಗೇಟ್ ಮುಂದೆ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.