ಉಡುಪಿ, ಜ 20 (DaijiworldNews/MS): ಓಎಲ್ ಎಕ್ಸ್ ನಲ್ಲಿ ಕಿವಿಯೋಲೆ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿ ವಿದ್ಯಾರ್ಥಿನಿಯೊಬ್ಬಳು ಸಾವಿರಾರು ರೂಪಾಯಿ ಕಳೆದುಕೊಂಡ ವಂಚನೆಗೊಳಗಾದ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖುಷಿ ಮೇಹ್ತಾ (19) ಜ. 16 ರಂದು ತನ್ನ ಕಿವಿಯೋಲೆ ಮಾರಾಟಕ್ಕಿರುವುದಾಗಿ OLX ನಲ್ಲಿ ಜಾಹೀರಾತು ನೀಡಿದ್ದು, ಇದನ್ನು ನೋಡಿ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ಕಿವಿಯೋಲೆಯನ್ನು ಖರೀದಿಸುವುದಾಗಿ ತಿಳಿಸಿ, ಹಣವನ್ನು ಪೇಟಿಎಂ ಮೂಲಕ ಪಾವತಿಸುವುದಾಗಿ ನಂಬಿಸಿ 5 ಹಾಗೂ 100 ರೂಪಾಯಿಗಳನ್ನು ಖಾತೆಗೆ ಜಮಾ ಮಾಡಿದ್ದಾನೆ. ಆದರೆ ಬಳಿಕ ವಿದ್ಯಾರ್ಥಿನಿಯ ಖಾತೆಯಿಂದ ಹಂತ ಹಂತವಾಗಿ ಒಟ್ಟು 19,018/- ಹಣ ಪೇಟಿಎಂ ಮೂಲಕ ಕಡಿತಗೊಂಡಿರುತ್ತದೆ.
ಇದನ್ನು ಗಮನಿಸಿ , ಅಪರಿಚಿತ ವ್ಯಕ್ತಿಗೆ ತನ್ನ ಖಾತೆಯಿಂದ ಕಡಿತಗೊಂಡ ಹಣದ ಬಗ್ಗೆ ಖುಷಿ ಮೇಹ್ತಾ ವಿಚಾರಿಸಿದಾಗ ಅಪರಿಚಿತ ವ್ಯಕ್ತಿ ಹಣ ಮರುಪಾವತಿ ಮಾಡುವುದಾಗಿ ನಂಬಿಸಿ, ಬೇರೆ ಯಾವುದಾದರು ಖಾತೆಯ ವಿವರವನ್ನು ಒದಗಿಸುವಂತೆ ತಿಳಿಸಿದ್ದಾನೆ. ಇದನ್ನು ನಂಬಿ ವಿದ್ಯಾರ್ಥಿನಿ ತನ್ನ ಸ್ನೇಹಿತೆಯ ಸಾಯಿ ಚಂದನ Paytm ನಂಬರ್ ನೀಡಿದ್ದಾರೆ.
ಅಪರಿಚಿತ ವ್ಯಕ್ತಿ ಕರೆ ಮಾಡಿ ಸ್ನೇಹಿತೆ ಟಿ. ಸಾಯಿ ಚಂದನರವರ ಮೊಬೈಲ್ಗೆ ಬಂದಿರುವ OTP ನಂಬರ್ ವನ್ನು ಪಡೆದು ಸ್ನೇಹಿತೆ ಟಿ.ಸಾಯಿ ಚಂದನರವರ ಖಾತೆಯಿಂದ ಹಂತ ಹಂತವಾಗಿ ಒಟ್ಟು 74,800 ಹಣ Paytm ಮೂಲಕ ಕಡಿತಗೊಂಡಿದೆ. ಒಟ್ಟಾರೆ 93,818 ರೂಪಾಯಿ ಹಣವನ್ನು Paytm ಮೂಲಕ ಕಡಿತಗೊಳಿಸಿ ಮೋಸ ಮಾಡಿರುವುದಾಗಿ ದೂರು ನೀಡಿದ್ದಾರೆ.