ಬಂಟ್ವಾಳ, ಜ 20 (DaijiworldNews/MS): ಬಂಟ್ವಾಳ ನೇತ್ರಾವತಿ ಸೇತುವೆಯ ಬಳಿಯಲ್ಲಿ, ವಿಟ್ಲ ಪಟ್ಟಣ ಪಂಚಾಯತ್ ಸಿಬ್ಬಂದಿಯೊಬ್ಬರು ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು ಸ್ಥಳೀಯರು ಅವರನ್ನು ಸೇತುವೆಯ ಬಳಿ ಕಂಡು ತಡೆದು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿಯನ್ನು ವಿಟ್ಲ ಪ.ಪಂಚಾಯತ್ ನ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ರಾಜೇಶ್ ಎಂದು ಗುರುತಿಸಲಾಗಿದೆ.
ವಿಟ್ಲದ ಮಂಗಳಪದವು ಎಂಬಲ್ಲಿಯ ವ್ಯಕ್ತಿಯೊಬ್ಬರಿಗೆ ಮನೆ ಮಂಜೂರಾತಿ ವಿಚಾರದಲ್ಲಿ ಪಟ್ಟಣ ಪಂಚಾಯತ್ ಮಾಜಿ ಸದಸ್ಯರೊಬ್ಬರು ರಾಜೇಶ್ ಲಂಚ ಕೇಳಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿತ್ತು.
ಇಂದು ಬೆಳಗ್ಗೆ ರಾಜೇಶ್ ಕೆಲವರಿಗೆ ವಾಟ್ಸಾಪ್ ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದು ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ್ದು ಇದರಿಂದ ಮಾನಸಿಕವಾಗಿ ಮನನೊಂದಿದ್ದೇನೆ. ಆದುದರಿಂದ ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಸಂದೇಶ ಕಳುಹಿಸಿದ್ದು ಬಳಿಕ ಡೆತ್ ನೋಟು ಬರೆದಿದ್ದು ಅದರಲ್ಲಿಯೂ ಕೂಡಾ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಈ ವಿಚಾರ ರಾಜೇಶ್ ಸ್ನೇಹಿತರ ಗಮನಕ್ಕೆ ಬಂದಿದ್ದು ತಕ್ಷಣವೇ ಅವರು ರಾಜೇಶ್ ಗಾಗಿ ಹುಟುಕಾಟ ಪ್ರಾರಂಭಿಸಿದ್ದು ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾಗಿದ್ದಾರೆ. ಅಲ್ಲಿಂದ ರಕ್ಷಿಸಿ ಕರೆ ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.