ಗುಂಡ್ಯ, ಜ 20 (DaijiworldNews/KP): ರಾಷ್ಟೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯನ್ನು ಚತುಷ್ಪತ ಕಾಮಗಾರಿಗಾಗಿ ಮುಚ್ಚುವ ಕುರಿತು ತೀರ್ಮಾನ ಕೈಗೊಳ್ಳಲೆಂದು ಗುರುವಾರ ಆಯೋಜಿಸಲಾಗಿದ್ದ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡದ ವೀಕ್ಷಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಆದೇಶದಂತೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಚತುಷ್ಪಥ ರಸ್ತೆಯಾಗಿ ವಿಸ್ತರಣೆ ಮಾಡಲು ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರಪುರದ ಆನೆಮಹಲ್ನಿಂದ ಶಿರಾಡಿ ಘಾಟ್ ಆರಂಭದ ಮಾರನಹಳ್ಳಿಯವರೆಗಿನ 10 ಕಿ. ಮೀ. ರಸ್ತೆ ಕಾಮಗಾರಿ ಮಾಡಲು ಆರು ತಿಂಗಳು ರಸ್ತೆ ಬಂದ್ ಮಾಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಟೆಂಡರ್ ವಹಿಸಿಕೊಂಡ ಕಂಪನಿ ಮನವಿ ಮಾಡಿತ್ತು. ಆದರೆ ರಸ್ತೆ ಬಂದ್ ಮಾಡುವ ವಿಚಾರವಾಗಿ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ಕೇಳಿಬಂದಿತ್ತು.
ಹೆದ್ದಾರಿ ಬಂದ್ಗೆ ಮಾಜಿ ಸಚಿವ ಎಚ್. ಡಿ. ರೇವಣ್ಣ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೂಡಾ ವಿರೋಧ ವ್ಯಕ್ತಪಡಿಸಿದ್ದು, ರಸ್ತೆ ಕಾಮಗಾರಿ ಆಗಬೇಕಾದರೆ ಹೆದ್ದಾರಿ ತಡೆ ಮಾಡುವ ಬದಲು ಏಕಮುಖ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಶಿರಾಡಿಯಲ್ಲಿ ಸಂಚಾರ ನಿಷೇಧಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಪ್ರಸ್ತಾವನೆಯ ಬಗ್ಗೆ ಏಕಾಏಕಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ. ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಖುದ್ದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಬಳಿಕವಷ್ಟೇ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಈಗಾಗಲೇ ಅವರು ಸೂಚಿಸಿದ್ದಾರೆ.