ಬೆಂಗಳೂರು,ಡಿ 07 ( MSP): ಮಲಬಾರಿನ ಕನಸಿನ ಯೋಜನೆಯಾದ ರಾಜ್ಯದ ನಾಲ್ಕನೇ ಕಣ್ಣೂರು ಗ್ರೀನ್ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜುಗೊಂಡಿದ್ದು, ಡಿ 9 ರಂದು ಲೋಕಾರ್ಪಣೆಯಾಗಲಿದೆ. ಕರ್ನಾಟಕದ ಕೊಡಗಿಗೆ 80 ಕಿ.ಮೀ ಹಾಗೂ ಮೈಸೂರು ಜಿಲ್ಲೆಗೆ 160 ಕಿ.ಮೀ ದೂರವಿರುವ ಈ ವಿಮಾನ ನಿಲ್ದಾಣ ತಮಿಳುನಾಡಿನ ಸೇಲಂ ಮತ್ತು ನೀಲಗಿರೀಸ್ ಜಿಲ್ಲೆ ಪ್ರಯಾಣಿಕರಿಗೂ ಈ ನಿಲ್ದಾಣ ಹತ್ತಿರವಾಗಿದೆ. ಒಟ್ಟು 3 ರಾಜ್ಯಗಳ ಗಡಿ ಜಿಲ್ಲೆಗಳ ಜನರಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಈ ನಿಲ್ದಾಣವಿದೆ.
ಇದೀಗ ನೂತನವಾಗಿ ಆರಂಭಗೊಳ್ಳಲಿರುವ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ವಾರಕ್ಕೆ ಒಟ್ಟು 6 ವಿಮಾನಗಳು ಹಾರಾಟ ನಡೆಸಲಿವೆ. ಡಿ.9 ರಿಂದ ಬೆಂಗಳೂರಿನಿಂದ ಕಣ್ಣೂರಿಗೆ ವಿಮಾನಗಳು ಹಾರಾಟ ಆರಂಭ ಮಾಡಲಿದೆ. ಬೆಂಗಳೂರಿನಿಂದ ಕಣ್ಣೂರಿಗೆ ವಿಮಾನದಲ್ಲಿ 80 ನಿಮಿಷದ ಅವಧಿಯಲ್ಲಿ ತಲುಪಬಹುದಾಗಿದೆ.
ಜಿ8 624 ವಿಮಾನವು ಕಣ್ಣೂರು ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹಾರಾಟ ನಡೆಸಲಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2.20ಕ್ಕೆ ಬಂದು ತಲುಪಲಿದೆ. ಜಿ8 625 ವಿಮಾನವು ಮಧ್ಯಾಹ್ನ 2.50ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದ್ದು, 4.10ಕ್ಕೆ ಕಣ್ಣೂರು ತಲುಪಲಿದೆ.