ಕಾರ್ಕಳ, ಜ 19 (DaijiworldNews/HR): ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ-ಸಂದೇಶ ಸರ್ವಕಾಲಿಕವಾಗಿದ್ದು, ಮಾನವತಾವಾದವು ಚಿರಾಯುವಾಗಲಿ ಎಂದು ಹೆಬ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಗರದ ಹೋಟೆಲ್ ಪ್ರಕಾಶ್ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರು ಶೋಷಿತಕ್ಕೆ ಒಳಗಾದ ಮನುಕುಲಕ್ಕೆ ಬೆಳಕಾದವರು. ಸುಭಾಶ್ಚಂದ್ರ ಬೋಸ್ರವರು ತನ್ನ ಬದುಕನ್ನೇ ದೇಶಕ್ಕಾಗಿ ಸಮರ್ಪಿಸಿದ ಸೇನಾನಿ. ಇವರಿಬ್ಬರ ಸಾಕ್ಷ್ಯ ಚಿತ್ರ(ಟ್ಯಾಬ್ಲೋ)ವನ್ನು ಪ್ರಜಾಪ್ರಭುತ್ವ ದಿನಾಚರಣೆಯ ಪೆರೇಡ್ನಲ್ಲಿ ಪಾಲ್ಗೊಳ್ಳಲು ಕೇಂದ್ರ ಸರಕಾರ ನಿರಾಕರಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ನಿಲುವಿನ ಕುರಿತು ಸಚಿವರಾದ ವಿ.ಸುನೀಲ್ಕುಮಾರ್ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಸಮರ್ಥಿಸಿಕೊಂಡಿರುವ ಕ್ರಮವು ಸರಿಯಲ್ಲ. ಹಿಂದುಳಿದ ವರ್ಗದವರ ಪರವಾಗಿ ಅವರಿಬ್ಬರು ಧ್ವನಿಗೂಡಿಸಬೇಕು. ನಾರಾಯಣಗುರು ಸ್ವಾಮಿಯ ತತ್ವ-ಸಂದೇಶವನ್ನು ರಾಷ್ಟ್ರಪಿತ ಮಹಾತ್ಮಗಾಂಧಿ, ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಪ್ರೇರೇಪಿತಗೊಂಡು ಮೆಚ್ಚಿಕೊಂಡಿರುವ ಬಗ್ಗೆ ಉಲ್ಲೇಖಿಸಿದರು.
ಅಂದು ಶೋಷಿತ ವರ್ಗದವರಿಗೆ ದೇವಾಲಯಗಳಲ್ಲಿ ಪ್ರವೇಶಕ್ಕೆ ಅವಕಾಶ ಇಲ್ಲದೇ ಇದ್ದ ಘೋರ ದಿನಗಳಲ್ಲಿ ನಾರಾಯಣ ಸ್ವಾಮಿ ಅವರು ಹಲವಡೆಗಳಲ್ಲಿ ಶೂದ್ರ ಶಿವನ ದೇವಸ್ಥಾನ ನಿರ್ಮಾಣ ಮಾಡಿ ಶೋಷಿತರಿಗೆ ದಾರಿ ತೋರಿಸಿದ್ದರು. ಅದರಲ್ಲಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ ಒಂದಾಗಿದೆ ಎಂದು ಉಲ್ಲೇಖಿಸಿದರು.
ಚುನಾವಣೆ ಹಾಗೂ ಹಿಂದು ಸಮಾಜೋತ್ಸವದ ಸಂದರ್ಭದಲ್ಲಿ ನಾರಾಯಣಗುರುಗಳ ಭಾವಚಿತ್ರಗಳನ್ನು ಅಳವಡಿಸುವವರು ಕೇಂದ್ರ ಸರಕಾರ ಸರಕಾರದ ಈಗೀನ ನಿಲುವಿನ ಕುರಿತು ಏಕೆ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ ನಕ್ರೆ, ಪ್ರಭಾಕರ ಬಂಗೇರತಾ, ಸುನೀಲ್ಕೋಟ್ಯಾನ್, ಧಮೇಂದ್ರ, ಶೋಭಾ ಮೊದಲಾದವರು ಉಪಸ್ಥಿತರಿದ್ದರು.