ಉಡುಪಿ, ಡಿ 07 ( MSP): ಲೋಕಸಭಾ ಚುನಾವಣೆ ಸನಿಹವಾಗುತ್ತಿದ್ದಂತೆ ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಿದ್ದು ರಾಜಕೀಯ ಚಟುವಟಿಕೆಗಳು ಗರಿಕೆದರಿದೆ. ಇದೆಲ್ಲದರ ನಡುವೆ ಹಿರಿಯ ನಾಯಕ ಜನತಾದಳ ಪರಿವಾರದಿಂದ ಬಂದ ರಾಜಕೀಯ ಧುರೀಣ ಜಯಪ್ರಕಾಶ್ ಹೆಗ್ಡೆ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಜೆಡಿಸ್ ಅಭ್ಯರ್ಥಿ ಯಾಗಿ ಸ್ಪರ್ಧಿಸುವ ಲೆಕ್ಕಾಚಾರ ದಲ್ಲಿದ್ದಾರೆ. ಅತ್ತ ಜೆಡಿಎಸ್ ಕೂಡ ಹೆಗ್ಡೆ ಅವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ದಲ್ಲಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಪ್ತ ಮೂಲಗಳ ಮಾಹಿತಿಯಂತೆ, ಜೆ.ಪಿ ಹೆಗ್ಡೆ ಶೀಘ್ರದಲ್ಲೇ ಜನತಾದಳ ಸೇರ್ಪಡೆಗೊಂಡು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನುವ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಇನ್ನೊಂದೆಡೆ ಸದ್ಯ ಬಿಜೆಪಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉತ್ಸಾಹವಿದ್ದಂತಿಲ್ಲ. ಅಲ್ಲದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡುವುದರ ಬಗ್ಗೆ ಸ್ಥಳೀಯ ಶಾಸಕರಲ್ಲೂ ಸಹಮತವಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದಿಂದ ಜಯಪ್ರಕಾಶ್ ಹೆಗ್ಡೆ ಹೆಗ್ಡೆ ಸ್ಪರ್ಧಿಸಿದರೆ ಇವೆಲ್ಲವೂ ಪ್ಲಸ್ ಆಗಿ ಸುಲಭದಲ್ಲಿ ಗೆಲುವು ಸಿಗಬಹುದು ಎನ್ನುವ ಲೆಕ್ಕಚಾರದಲ್ಲಿ ಜೆಡಿಎಸ್ ಇದ್ದು ಹೀಗಾಗಿ ಹೆಗ್ಡೆ ಕಡೆ ಜೆಡಿಎಸ್ ಕೂಡಾ ಒಲವು ತೋರಿದೆ ಎನ್ನಲಾಗಿದೆ.
ಇದಲ್ಲದೆ ಜೆ.ಪಿ ಹೆಗ್ಡೆ ಅವರಿಗೆ ಜೆಡಿಎಸ್ ಕೂಡಾ ತೆರೆಮರೆಯಲ್ಲಿಯೇ ವೇದಿಕೆ ಸಿದ್ದಮಾಡುತ್ತಿದೆ ಎನ್ನಲಾಗಿದೆ. ಜತೆಗೆ ಒಂದು ವೇಳೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಜೆ.ಪಿ ಹೆಗ್ಡೆ ಕಣಕ್ಕೆ ಇಳಿದರೆ ರಾಜ್ಯ ಕಾಂಗ್ರೆಸ್ ಕೂಡಾ ಬೆಂಬಲಿಸಬೇಕು ಎನ್ನುವ ಒಳ ಒಪ್ಪಂದವೂ ನಡೆದಿದೆ. ಇದೇ ಲೆಕ್ಕಚಾರದಲ್ಲಿ ಜೆ.ಪಿ ಹೆಗ್ಡೆ ಗಾಂಧಿ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಹಿರಿಯ ನಾಯಕ, ಅಹ್ಮದ್ ಪಟೇಲ್ ಅವರನ್ನು ಭೇಟಿಯಾಗಿದ್ದಾರೆ ಎನ್ನುವ ಮಾಹಿತಿ ಇದೆ.
ಇನ್ನು ಈ ಹಿಂದೆ ಬ್ರಹ್ಮಾವರ ಕ್ಷೇತ್ರ ದಿಂದ ಶಾಸಕರಾದ ಜಯಪ್ರಕಾಶ್ ಹೆಗ್ಡೆ ನಂತರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಜನತಾ ಪರಿವಾರದ ಇಬ್ಭಾಗವಾದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿಯೂ ಜಯಶಾಲಿಯಾಗಿದ್ದರು. ಕ್ಷೇತ್ರ ಮರುವಿಂಗಡಣೆಯ ಬಳಿಕ ಬ್ರಹ್ಮಾವರ ಕ್ಷೇತ್ರ ವಿಲೀನ ಗೊಂಡಾಗ ಕಾಂಗ್ರೆಸ್ ಸೇರಿದ್ದ ಹೆಗ್ಡೆ ಅವರು ಹುಟ್ಟೂರು ಕುಂದಾಪುರ ಕ್ಷೇತ್ರದಲ್ಲಿ ಅಭ್ಯರ್ಥಿಯಾದರು. ಆದರೆ ಕ್ಷೇತ್ರದ ಇನ್ನೋರ್ವ ಪ್ರಭಾವಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರೆದುರು ಸೋಲು ಅನುಭವಿಸಬೇಕಾಯಿತು. ಸಂಸದರಾಗಿದ್ದ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿ ಯಾದ ನಂತರ ನಡೆದ ಉಪ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಕಾರ್ಕಳ ಅವರ ವಿರುದ್ಧ ಜಯಭೇರಿ ಬಾರಿಸಿ ಸಂಸತ್ ಗೆ ಆಯ್ಕೆಯಾಗಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಸೋಲು ಅನುಭವಿಸಿದ್ದರು. ಪರಿಷತ್ ಚುನಾವಣೆಯ ವೇಳೆ ಕಾಂಗ್ರೆಸ್ ಪ್ರಭಾವಿ ಮುಖಂಡ ಪ್ರತಾಪ್ ಚಂದ್ರ ಶೆಟ್ಟರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಪಕ್ಷದಿಂದಲೇ ಅಮಾನತುಗೊಂಡಿದ್ದರು.
ಎಲ್ಲವೂ ಅಂದುಕೊಂಡಂತೆ ಆದರೆ ಸಜ್ಜನ ರಾಜಕಾರಣಿ ಎಂದು ಖ್ಯಾತಿ ಪಡೆದ ಸಮ್ಮಿಶ್ರ ಸರ್ಕಾರದ ಬೆಂಬಲಿತ ಲೋಕಸಭಾ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಸಂಸದ ಜಯಪ್ರಕಾಶ್ ಹೆಗ್ಡೆ ಈ ಬಾರಿಯ ಕಣಕ್ಕಿಳಿಯುವುದು ಖಚಿತ.
ಆದರೆ ಈ ಬಗ್ಗೆ ದಾಯ್ಜಿ ವಲ್ಡ್ ವಾಹಿನಿಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಜೆಡಿಎಸ್ ಸೇರ್ಪಡೆ ವದಂತಿಯನ್ನು ತಳ್ಳಿ ಹಾಕಿದ್ದಾರೆ.ನಾನು ದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಜತೆ ಮಾತುಕತೆಯೇ ನಡೆಸಿಲ್ಲ ಅಲ್ಲದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗದೇ ಬಹಳ ದಿನಗಳೇ ಕಳೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ.