ಕಾಸರಗೋಡು ಜ 18 (DaijiworldNews/KP): ಮದುವೆ ಮನೆಯಲ್ಲಿ ತುಳುನಾಡಿನ ದೈವ ಕೊರಗಜ್ಜ ದೇವರಂತೆ ವೇಷಧರಿಸಿ, ವಿಟ್ಲ ಸಾಲೆತ್ತೂರಿನ ವಧುವಿನ ಮನೆಗೆ ತೆರಳಿದ ಆರೋಪ ಹೊತ್ತಿರುವ ಮಂಜೇಶ್ವರದ ಉಪ್ಪಳ ಬೇಕೂರಿನ ಉಮರುಲ್ ಬಾತೀಶ್ ಅವರ ಮನೆಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿರುವ ಘಟನೆ ನಡೆದಿದೆ.
ಬೈಕ್ ಬಂದ ದುಷ್ಕರ್ಮಿಗಳು ವರನ ಮನೆಯ ಕಾಂಪೌಂಡ್ ಗೋಡೆಗೆ ಕೇಸರಿ ಬಣ್ಣ ಬಳಿದಿದ್ದಾರೆ ಎನ್ನಲಾಗಿದ್ದು, ಗಾಜು ಒಡೆದ ಸದ್ದು ಕೇಳಿ ಗಾಬರಿಯಿಂದ ಬಾಗಿಲು ತೆರೆದು ಹೊರಗೆ ಬಂದು ನೋಡಿದಾಗ ಇಬ್ಬರು ದುಷ್ಕರ್ಮಿಗಳು ಬೈಕ್ ಏರಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈ ಪ್ರಕರಣ ದಾಖಲಿಸಿಕೊಂಡಿರುವ ಕುಂಬಳೆ ಪೊಲೀಸರು ಉಮರುಲ್ ಬಾತೀಶ್ ಅವರ ಮನೆಗೆ ರಕ್ಷಣೆ ಒದಗಿಸಿದ್ದಾರೆ.
ಈಗಾಗಲೆ ಕೊರಗಜ್ಜ ದೇವರಂತೆ ವೇಷ ಧರಿಸಿ ಬಂದ ವರ ಸೇರಿದಂತೆ 25 ಮಂದಿ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದ್ದು ಇತರರು ತಲೆಮರೆಸಿಕೊಂಡಿದ್ದಾರೆ.