ಉಡುಪಿ, ಜ 18 (DaijiworldNews/HR): ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯದಲ್ಲಿ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು ಇಂದು ಬೆಳಗಿನ ಜಾವ 5:55ಕ್ಕೆ ಸರಿಯಾಗಿ ನಾಲ್ಕನೇ ಬಾರಿಗೆ ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡಿದ್ದಾರೆ.
ಉಡುಪಿಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಸಂಭ್ರಮ ಕೊರೊನಾ ಕಾರಣದಿಂದ ಸರಳವಾಗಿ ನಡೆದರೂ, ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ವೈಭವವಾಗಿ ಮೆರವಣಿಗೆ ನಡೆದಿದೆ.
ಕೊರೊನಾ ಹಿನ್ನೆಲೆ ನೈಟ್ ಕರ್ಫ್ಯೂ ವಿಧಿಸಿದ್ದರಿಂದ ವಿಜೃಂಭಣೆಯಿಂದ ನೆರವೇರಬೇಕಿದ್ದ ಪರ್ಯಾಯೋತ್ಸವದ ಮೆರವಣಿಗೆ ಸರಳವಾಗಿ ನಡೆದಿದೆ.
ಇನ್ನು ಪರ್ಯಾಯ ಮುಗಿಸಿದ ಅದಮಾರು ಈಶಪ್ರಿಯ ತೀರ್ಥ ಸ್ವಾಮೀಜಿಯವರಿಂದ ಮಧ್ವಾಚಾರ್ಯರು ಅನುಗ್ರಹಿಸಿದ ಅಕ್ಷಯ ಪಾತ್ರೆಯನ್ನು ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದರು. ಬಳಿಕ ಪವಿತ್ರ ಸರ್ವಜ್ಞ ಪೀಠಾರೋಹಣಗೈಯ್ಯುವ ಮೂಲಕ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಪರ್ಯಾಯ ಆರಂಭಿಸಿದ್ದಾರೆ.