ಮಂಗಳೂರು, ಜ 17 (DaijiworldNews/HR): ದರೋಡೆ ಮತ್ತು ಕೊಲೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕಾಶಭವನ ಶರಣ್ ಮತ್ತು ಇತರರೊಂದಿಗೆ ಬಂಧಿತರಾಗಿರುವ ಬಂಧಿತ ಆರೋಪಿಗಳ ಪೈಕಿ ಚೇತನ್ ಕೊಟ್ಟಾರಿ ಎಂಬವರ ಪತ್ನಿ ಭಾಗ್ಯಶ್ರೀ ಮತ್ತು ಪ್ರಸಾದ್ ಅವರ ಪತ್ನಿ ನಿಕ್ಷಿತಾ ತಮ್ಮ ಪತಿಗಳು ಯಾವುದೇ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗಿಲ್ಲ ಆದರೂ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಗ್ಯಶ್ರೀ ಮತ್ತು ನಿಕ್ಷಿತಾ, ಸಿಸಿಬಿ ಪೊಲೀಸರು ಚೇತನ್ ಕೊಟ್ಟಾರಿ ಹಾಗೂ ಪ್ರಸಾದ್ ಇಬ್ಬರನ್ನು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಅವರು ಯಾವುದೇ ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗದಿದ್ದರೂ ಅವರ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿ ಆರೋಪಿಯನ್ನಾಗಿ ಪ್ರತಿಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರ ಈ ರೀತಿಯ ದರ್ಪದ ವರ್ತನೆ ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕರ, ಅಮಾಯಕರನ್ನು ಆರೋಪಿಗಳೆಂದು ಉಲ್ಲೇಖಿಸಿ ಸಂವಿಧಾನದ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿ ಕುರಿತು ಸೂಕ್ತ ತನಿಖೆ ನಡೆಸುವಂತೆ ಭಾಗ್ಯಶ್ರೀ ಮತ್ತು ನಿಕ್ಷಿತಾ ಆಗ್ರಹಿಸಿದ್ದು, ಈ ಪ್ರಕರಣದಲ್ಲಿ ತಮ್ಮ ಗಂಡಂದಿರು ಭಾಗಿಯಾಗಿಲ್ಲ ಎಂದು ನಾವು ಯಾವುದೇ ದೈವಸ್ಥಾನಗಳಲ್ಲಿ ಧಾರ್ಮಿಕ ಪ್ರತಿಜ್ಞೆಯನ್ನು ಕೈಗೊಳ್ಳಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.