ಪುತ್ತೂರು, ಜ 17 (DaijiworldNews/HR): ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಬಳಿ ನಿಲ್ಲಿಸಿದ್ದ ಬೈಕ್ ಕಳವುಗೈದು ಬಳಿಕ ನೆಲ್ಯಾಡಿ ಸಮೀಪದ ಅರಳ ಎಂಬಲ್ಲಿ ವಾಸವಾಗಿರುವ ಆಂಧ್ರ ಪ್ರದೇಶ ಮೂಲದ ಕೆಲ ಕಾರ್ಮಿಕರನ್ನು ಬೆದರಿಸಿ ಅವರ ಬಳಿಯಿದ್ದ ಮೊಬೈಲ್, ನಗದು ಹಾಗೂ ಬೈಕ್ ಅನ್ನು ದರೋಡೆಕೋರರು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದು, ಅದರಲ್ಲಿ ಒಂದು ಬೈಕ್ ಅಪಘಾತಕ್ಕೀಡಾಗಿ ಸವಾರನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ.
ಈ ಸಂಬಂಧ ಆಂಧ್ರಪ್ರದೇಶದ ಕೊಮ್ಮವರಂ ಗ್ರಾಮದ ಬಟ್ಟಲು ವೆಂಕಟೇಶ್ವರಲು (30) ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಹೆದ್ದಾರಿ ಕೆಲಸ ಮಾಡುತ್ತಿರುವ ಆಂಧ್ರ ಪ್ರದೇಶ ಮೂಲದ ಕೆಲ ಕಾರ್ಮಿಕರ ಬಾಡಿಗೆ ಕೊಠಡಿಯಲ್ಲಿ ವಾಸವಿದ್ದು, ಜನವರಿ 13ರ ರಾತ್ರಿ ವ್ಯಕ್ತಿಯೊಬ್ಬ ಬಂದು ಬೈಕನ್ನು ತನಗೆ ಒಪ್ಪಿಸುವಂತೆ ಒತ್ತಾಯಿಸಿದ್ದು, ಅವನೊಂದಿಗಿದ್ದ ಮತ್ತೊಬ್ಬ ವ್ಯಕ್ತಿ ಬೆದರಿಸಿ ನನ್ನ ಅಂಗಿಯ ಜೇಬಿನಲ್ಲಿಟ್ಟಿದ್ದ 200 ರೂ. ಬಲವಂತವಾಗಿ ತೆಗೆದುಕೊಂಡು ಹೋಗಿದ್ದಾರೆ. ನಮ್ಮ ಕೋಣೆಗೆ ನುಗ್ಗಿದ ವ್ಯಕ್ತಿ, ಬ್ಯಾಗ್ನಲ್ಲಿದ್ದ ನಗದು ಹೊರತುಪಡಿಸಿ ನಾಲ್ಕು ಮೊಬೈಲ್ ಫೋನ್ಗಳನ್ನು ತೆಗೆದುಕೊಂಡು ನಮ್ಮಿಂದ ಸುಮಾರು 1.3 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ನಡುವೆ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್ನ ಮಹಮ್ಮದ್ ಅವರು ಯಾವುದೋ ಉದ್ದೇಶಕ್ಕೆ ಬೇರೆ ಜಿಲ್ಲೆಗೆ ತೆರಳುವಾಗ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಪಕ್ಕದ ಜೈನ ಬಸದಿಯ ಬಳಿ ಬೈಕ್ ನಿಲ್ಲಿಸಿದ್ದು, ಅದನ್ನು ಡುಪ್ಲಿಕೇಟ್ ಕೀ ಬಳಸಿ ಕಳ್ಳತನ ಮಾಡಿದ್ದಾರೆ. ಈ ಕಳ್ಳತನದ ಬಗ್ಗೆ ಮುಹಮ್ಮದ್ ಅವರ ಪತ್ನಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜನವರಿ 13 ರಂದು ತಡರಾತ್ರಿ ಅಡ್ಡಹೊಳೆಯಲ್ಲಿ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದು ಅದರ ಸವಾರ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೈಕ್ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಮಹಮ್ಮದ್ ಅವರನ್ನು ಸಂಪರ್ಕಿಸಿದಾಗ ಈ ಬೈಕ್ ಕಳ್ಳತನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.