ಮಂಗಳೂರು, ಜ 17 (DaijiworldNews/HR): ರಾಜ್ಯ ಸರ್ಕಾರ ಜನರ ಜೀವನದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದು, ತಕ್ಷಣ ವಿಕೇಂಡ್ ಕರ್ಫ್ಯೂ ಹಿಂಪಡೆಯುವಂತೆ ಶಾಸಕ ಯುಟಿ ಖಾದರ್ ಒತ್ತಾಯಿಸಿದ್ದಾರೆ.
ನಗರದ ಜ. 17 ರಂದು ಸೋಮವಾರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಖಾದರ್ "ಕೋವಿಡ್ ರೂಪಾಂತರಿ ಓಮಿಕ್ರಾನ್ನಿಂದ ಜನರಿಗೆ ಯಾವುದೇ ಅಪಾಯವಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಚೆನ್ನಾಗಿ ತಿಳಿದಿದ್ದರೂ, ರಾಜ್ಯ ಸರ್ಕಾರ ಅನಗತ್ಯವಾಗಿ ಜನರಲ್ಲಿ ಭಯವನ್ನು ಹುಟ್ಟುಹಾಕುತ್ತಿದೆ. ಓಮಿಕ್ರಾನ್ನಿಂದಾಗಿ ಸಾವನ್ನಪ್ಪಿರುವ ಬಗ್ಗೆ ಇದುವರೆಗೆ ಒಂದೇ ಒಂದು ವರದಿಯನ್ನು ಆರೋಗ್ಯ ಇಲಾಖೆ ನೀಡಿಲ್ಲ. ವಾರಾಂತ್ಯದ ಕರ್ಫ್ಯೂ ಕುರಿತು ರಾಜ್ಯ ಸರ್ಕಾರ ವೈಜ್ಞಾನಿಕ ನಿರ್ಧಾರ ಕೈಗೊಂಡಿಲ್ಲ ಆದರೆ ಮೇಕೆದಾಟು ಪಾದಯಾತ್ರೆ ಹಳಿತಪ್ಪಿಸುವ ರಾಜಕೀಯ ನಿರ್ಧಾರವಾಗಿದೆ. ವಾರಾಂತ್ಯದ ಕರ್ಫ್ಯೂ ಜನರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ವಿಶೇಷವಾಗಿ ದಿನಗೂಲಿ ಕಾರ್ಮಿಕರು, ತರಕಾರಿ ಮಾರಾಟಗಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಾರಾಂತ್ಯದ ಕರ್ಫ್ಯೂನಿಂದ ಅನೇಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದರು
ಇನ್ನು "ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಕ್ರಮಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
ವೆನ್ಲಾಕ್ನಲ್ಲಿ ಲ್ಯಾಬ್ ಸಿಬ್ಬಂದಿ ಕೊರತೆಯಿಂದ ಒತ್ತಡ ಎದುರಿಸುತ್ತಿದೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಂತ್ರಜ್ಞರಿಲ್ಲ, ಅದನ್ನು ಒದಗಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮುಂಬರುವ ಗಣರಾಜ್ಯೋತ್ಸವ ಪರೇಡ್ಗಾಗಿ ಕೇರಳದ ಬ್ರಹ್ಮಶ್ರೀ ನಾರಾಯಣ ಗುರು ಟ್ಯಾಬ್ಲೋ ವಿನ್ಯಾಸವನ್ನು ತಿರಸ್ಕರಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡೆಯನ್ನು ಖಾದರ್ ಖಂಡಿಸಿರುವ ಅವರು, ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಸುಮ್ಮನಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ತಿರಸ್ಕರಿಸುವ ಮೂಲಕ ಅವರ ವಿಚಾರಧಾರೆಗಳನ್ನು ತಿರಸ್ಕರಿಸುವ ಸಂದೇಶವನ್ನು ಕೇಂದ್ರ ಸರ್ಕಾರ ಹರಡುತ್ತಿದೆ ಎಂದು ಆರೋಪಿಸಿದ್ದಾರೆ.