ಉಡುಪಿ, ಡಿ 07( MSP): ಬೈಂದೂರು ರೈಲ್ವೆ ನಿಲ್ದಾಣವನ್ನು ಇನ್ನಷ್ಟು ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಅವರು ಬೈಂದೂರಿನಲ್ಲಿ ಗುರುವಾರ ಸಂಸದರ ಕಚೇರಿ ಉದ್ಘಾಟನೆ ಹಾಗೂ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು. ಬೈಂದೂರು ರೈಲ್ವೆ ನಿಲ್ದಾಣದ ಮೂಲ ಸೌಕರ್ಯಗಳನ್ನು ಬಲಪಡಿಸಲಾಗುವುದು, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.ಬೈಂದೂರು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಬಂದಿರುವ ಸಮಸ್ಯೆಗಳ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತರಲಾಗುವುದು. ಮರವಂತೆ ಬ್ರೇಕ್ ವಾಟರ್ ಕಾಮಗಾರಿ ತ್ವರಿತಗೊಳಿಸಲಾಗುವುದು ಎಂದು ಹೇಳಿದರು.
ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆಯಲ್ಲಿ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಯಾವುದೇ ವಿವರ ಕೇಳದೆ ಚಿಕಿತ್ಸೆ ನೀಡಬೇಕು. ಇದರಲ್ಲಿ ವಿಳಂಬ ಸಲ್ಲದು ಎಂದು ಸೂಚಿಸಿದ ಸಂಸದರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರು.
ಬೈಂದೂರು ತಾಲೂಕು ಆಸ್ಪತ್ರೆಗೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇಲ್ಲಿಗೆ ಡಯಾಲಿಸಿಸ್ ಯಂತ್ರ ಒದಗಿಸಲಾಗುವುದು ಎಂದು ಸಂಸದರು ತಿಳಿಸಿದರು. ಸ್ಮಶಾನಕ್ಕೆ ಜಾಗ ಕೋರಿ ಬಂದಿರುವ ಪ್ರಸ್ತಾವನೆಗಳಿಗೆ ಕೂಡಲೇ ಜಾಗ ಮಂಜೂರು ಮಾಡಬೇಕು. ವಸತಿ ಯೋಜನೆಗಳಿಗೂ
ಅಗತ್ಯ ಜಾಗ ಒದಗಿಸಲು ಅವರು ತಿಳಿಸಿದರು.
ಬೈಂದೂರಿನಲ್ಲಿ ಇಂದು ಸ್ಥಾಪಿತವಾಗಿರುವ ಸಂಸದರ ಕಚೇರಿಯಲ್ಲಿ ನಿರಂತರವಾಗಿ ಸಾರ್ವಜನಿಕರ ಆಹ್ವಾನ ಸ್ವೀಕರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಶಾಸಕ ರುದ್ರೇಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿಂಧು ಬಿ ರೂಪೇಶ್, ಕುಂದಾಪುರ ಸಹಾಯಕ ಆಯುಕ್ತ ಭೂಬಾಲನ್ ಉಪಸ್ಥಿತರಿದ್ದರು.