ಉಡುಪಿ, ಜ 17 (DaijiworldNews/HR): ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯೋತ್ಸವಕ್ಕೆ ಇಂದಿನಿಂದ ಸಿದ್ದತೆಗಳು ಆರಂಭವಾಗಲಿದ್ದು, ಈ ಬಾರಿಯ ಪರ್ಯಾಯೋತ್ಸವವನ್ನು ಸರಳವಾಗಿ ಆಚರಿಸಲಾಗುವುದು ಎಂದು ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಪರ್ಯಾಯೋತ್ಸವ ದರ್ಬಾರ್ ಜನವರಿ 18 ಮಂಗಳವಾರ ಬೆಳಿಗ್ಗೆ ಸರಳವಾಗಿ ನಡೆಸಲು ಶ್ರೀ ಕೃಷ್ಣಾಪುರ ಪರ್ಯಾಯೋತ್ಸವ ಸಮಿತಿಯ ಪ್ರಮುಖ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಎರಡು ದಿನಗಳು ನಡೆಯುವ ಪರ್ಯಾಯೋತ್ಸವ ನಿಮಿತ್ತ ಜಿಲ್ಲಾಡಳಿತ ಹಾಗೂ ಸಮಿತಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದ್ದು, ಪರ್ಯಾಯ ಪೀಠ ಅಲಂಕರಿಸಲಿರುವ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಈಗಾಗಲೇ ಸಾಂಪ್ರದಾಯಿಕವಾಗಿ ತೀರ ಸರಳ ರೀತಿಯಲ್ಲಿ ಪರ್ಯಾಯೋತ್ಸವ ನಡೆಯಲಿದ್ದು, ಇದಕ್ಕೆ ಸಹಕರಿಸುವಂತೆ ನಾಗರಿಕರು, ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಸಾಂಪ್ರದಾಯಿಕ ಆಚರಣೆಗೆ ಹೆಚ್ಚು ಒತ್ತು ನೀಡಿ ಸರಳವಾಗಿಯೇ ಪರ್ಯಾಯೋತ್ಸವ ನಡೆಯಲಿದೆ. ಜ.17ರ ರಾತ್ರಿ 9 ಗಂಟೆ ಅನಂತರ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ.