Karavali
ಕಾರ್ಕಳ: ಕೋಟ್ಯಾಂತರ ವ್ಯಯಿಸಿದರೂ ಪ್ರಗತಿಯಲ್ಲಿ ಕುಂಠಿತಗೊಂಡ ಸಣ್ಣಕೈಗಾರಿಕಾ ಪ್ರದೇಶ
- Mon, Jan 17 2022 08:26:10 AM
-
ಆರ್. ಬಿ.ಜಗದೀಶ್
ಕಾರ್ಕಳ, ಜ 16 (DaijiworldNews/MS): ನಿರುದ್ಯೋಗ ಸಮಸ್ಸೆ ಪರಿಹರಿಸುವ ನಿಟ್ಟಿನಲ್ಲಿ 1978-79ರ ಕಾಲಾವಧಿಯಲ್ಲಿ ಕರ್ನಾಟಕ ರಾಜ್ಯ ಸರಕಾರವು ಕಾರ್ಕಳ ತಾಲೂಕಿನ ಸರ್ವೇ ನಂಬ್ರ 663ರ 10 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಸಣ್ಣ ಕೈಗಾರಿಕಾ ಪ್ರದೇಶ ಸ್ಥಾಪಿಸಿತು. ಆರಂಭದಲ್ಲಿ ತೋರಿದ ಉತ್ಸುಹಕತೆಯು ಬರುಬರುತ್ತಾ ಕ್ಷೀಣಿಸುತ್ತಾ ಹೋದುದರಿಂದ ಆ ಪ್ರದೇಶವು ಇದೀಗ ಪಾಳು ಬಿದ್ದಿದೆ.
ಗಗನ ಕುಸುಮವಾದ ಸ್ವಾವಲಂಬನೆ ಬದುಕು:
ಕಾರ್ಕಳ ನಗರದಿಂದ ಸುಮಾರು 2 ಕಿ.ಮೀ ದೂರದಲ್ಲಿ ಇರುವ ತಾಲೂಕು ಕ್ರೀಡಾಂಗಣದ ಸನ್ನಿಹದಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಸಣ್ಣ ಕೈಗಾರಿಕಾ ವಲಯವು ಸ್ಥಾಪಿಸಲಾಗಿತ್ತು. ಮೊದಲ ಹಂತದಲ್ಲಿ ಬಿ-2, ಡಿ-8 ಸೇರಿಂದತೆ 10 ಶೆಡ್ಗಳನ್ನು ನಿರ್ಮಿಸಲಾಗಿತ್ತು.ಅದರಲ್ಲಿ ಪ್ರಸ್ತುತ 1 ಶೆಡ್ನಲ್ಲಿ ಮಾತ್ರ ಸಣ್ಣ ಕೈಗಾರಿಕೆ ಕಾರ್ಯಚರಿಸುತ್ತಿದೆ. ಉಳಿದ 9 ಕೇಂದ್ರಗಳು ಸ್ಥಗಿತಗೊಂಡಿವೆ. ಅದರಲ್ಲಿ ಕೆಲವೊಂದು ಕೇಂದ್ರಗಳು ಬಾಗಿಲು ಮುಚ್ಚಿರುವುದು ಕಂಡು ಬಂದರೆ ಉಳಿದೆಲ್ಲವುಗಳಿಗೆ ಬಾಗಿಲುಗಳೇ ಇಲ್ಲ. 24 ವರ್ಷದಿಂದ ತೆರೆದುಕೊಂಡಿರುವುದರಿಂದ ಅಲ್ಲಿ ಅನೈತಿಕ ಚಟುವಟಿಕೆಗಳು ಕೈಬೀಸಿ ಕರೆಯುತ್ತಿರುವುದರಿಂದ ಸ್ವಾಸ್ಥ್ಯ ಸಾಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ.ಮೂಲ ಸೌಕರ್ಯದ ಕೊರತೆ
ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮ ಶಿವಮೊಗ್ಗ ವಲಯದ ಅಧೀನದಲ್ಲಿ ಇದ್ದ ಕಾರ್ಕಳ ದ ಸಣ್ಣ ಕೈಗಾರಿಕ ವಲಯದಲ್ಲಿ ಸಮರ್ಪಕವಾಗಿ ಮೂಲ ಸೌಕರ್ಯಗಳು ಇರಲಿಲ್ಲ. ಹಂತ ಹಂತವಾಗಿ ಒಂದಿಷ್ಟು ಅಭಿವೃದ್ಧಿ ಪಡಿಸಲಾಯಿತು.ನಂತರದ ದಿನಗಳಲ್ಲಿ ಇದನ್ನು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಮಂಗಳೂರಿನ ಶಾಖೆಯೇ ಅಭಿವೃದ್ಧಿ ಪಡಿಸುತ್ತಿತ್ತು.
2021 ಸಪ್ಪೆಂಬರ್ ತಿಂಗಳಿನಲ್ಲಿ ಮತ್ತೇ ಶಿವಮೊಗ್ಗ ವಲಯ ಕಚೇರಿಯೇ ಇದರ ಅಭಿವೃದ್ಧಿ ಜವಾಬ್ದಾರಿ ವಹಿಸಿಕೊಂಡಿದೆ.
ರಸ್ತೆ ಬದಿಯಲ್ಲಿ ಮೆಸ್ಕಾಂ ಇಲಾಖೆ ಅಳವಡಿಸುವ ಸಿಮೆಂಟ್ ನಿರ್ಮಿತ ವಿದ್ಯುತ್ ಕಂಬದ ಎತ್ತರಕ್ಕೆ ಸರಿಸಮಾನವಾಗಿ ಈ ಪ್ರದೇಶದಲ್ಲಿ ಕಬ್ಬಿಣದಿಂದ ನಿರ್ಮಿಸಲಾಗಿದ್ದ 21 ಬೀದಿ ದೀಪದ ಕಂಬಗಳು ಕಾಣಸಿಗುತ್ತದೆ. ಅದರಲ್ಲಿ 8ಕಂಬಗಳು ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಅಳವಡಿಸಲಾಗಿತ್ತು. ವಿದ್ಯುತ್ ಕೇಬಲ್ ಅಳವಡಿಕೆ, ಕಂಬದ ಜೋಡಣೆಗೆ ಕಾಂಕ್ರೀಟ್ ಅಡಿಪಾಯ, ಎಲ್ಇಡಿ ಬಲ್ಬ್ ಸಹಿತಿ ಇದಕ್ಕೆ ತಗುಲಿದ ವೆಚ್ಚ ರೂ. 8 ಲಕ್ಷವಾಗಿದೆ.ದಾರಿದೀಪಗಳೇ ಪ್ರಜ್ವಲಿಸದೇ ರಾತ್ರಿ ವೇಳೆಗೆ ಸಣ್ಣ ಕೈಗಾರಿಕಾ ವಲಯವು ಬರೀ ಕತ್ತಲೆಯಿಂದ ಆವರಿಸಿಕೊಂಡಿದೆ.
ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮವು ಈ ಪ್ರದೇಶದ ಒಂದಿಷ್ಟು ಭಾಗ ಅಭಿವೃದ್ಧಿ ಪಡಿಸಿ 2004 ಮಾರ್ಚ್ 31ರಂದು ಅದರ ನಿರ್ವಹಣೆಗಾಗಿ ಕಾರ್ಕಳ ಪುರಸಭೆಗೆ ಹಸ್ತಾಂತರಿಸಿದೆ.
ಒಂದೆಡೆಯಲ್ಲಿ ಸಣ್ಣ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ತೆರೆಯದೇ ಇದ್ದು, ತೆರೆದಿದ್ದ ಬಹುತೇಕ ಕೇಂದ್ರಗಳಿಗೆ ಬೀಗ ಜಡಿದಿರುವ ದುರವಸ್ಥೆ ಇಲ್ಲಿ ಕಂಡುಬರುತ್ತಿದೆ. ಇದರ ನಡುವೆ ಲಕ್ಷಾಂತರ ವೆಚ್ಚದಲ್ಲಿ ಬೀದಿ ದೀಪಗಳನ್ನು ಅಳವಡಿಸಿರುವುದು ಯಾವ ಉದ್ದೇಶಕ್ಕೆ ಎಂಬುವುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ.ಸಣ್ಣ ಕೈಗಾರಿಕಾ ವಲಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಮುಂದಾಗಿದ್ದು, ಸಮಗ್ರ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರೂ. 12 ಲಕ್ಷ ವೆಚ್ಚದಲ್ಲಿ 100 ಕೆವಿ ಸಾಮಾಥ್ಯದ 2 ಟ್ರಾನ್ಸ್ಪಾರ್ಮ್, 40 ಸಿಮೆಂಟ್ ವಿದ್ಯುತ್ ಕಂಬಗಳನ್ನು ಈಗಾಗಲೇ ಅಳವಡಿಸಿದೆ.
ನೂತನ ವಿದ್ಯುತ್ ಲೈನ್ ಸಂಪರ್ಕಿಸುವ ಕಡೆಗಳಲ್ಲಿ ಅಡಚಣೆಯಾಗುವ 7 ಕಬ್ಬಿಣದ ವಿದ್ಯುತ್ ಕಂಬಗಳ ಬದಲಾವಣೆಗೆ ಮುಂದಾಗಿದೆ.ರಸ್ತೆ ನಿರ್ಮಾಣಕ್ಕೆ ರೂ. 1.65 ಕೋಟಿ :
ಕಳೆದ ನಾಲ್ಕು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ 1400 ಮೀಟರ್ ಉದ್ದದ ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗಿತ್ತು. ಅದರ ವೆಚ್ಚ ರೂ. 1ಕೋಟಿ 65 ಲಕ್ಷ ಆಗಿರುತ್ತದೆ.
ಸಣ್ಣ ಕೈಗಾರಿಕಾ ವಲಯದಲ್ಲಿ ಇನ್ನೂ ಕೆಲ ಸೈಟ್ಗಳು ಖಾಲಿಖಾಲಿಬಿದ್ದಿದೆ. ಯಾವುದೇ ವ್ಯಕ್ತಿಗಳು ಸಂಘ-ಸಂಸ್ಥೆಗಳು ಈ ವಲಯದಲ್ಲಿ ಸಣ್ಣಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುತ್ತಿಲ್ಲ.
ಸಣ್ಣ ಕೈಗಾರಿಕಾ ವಲಯದ ಅಭಿವೃದ್ಧಿಗೆ ಸರಕಾರದಿಂದ ಲಕ್ಷಾಂತರ ವೆಚ್ಚವನ್ನು ಇದೇ ವಲಯಕ್ಕೆ ಭರಿಸುತ್ತಾ ಬಂದಿದ್ದರೂ, ಜನಪಯೋಗವಾಗದೇ ಇರುವುದು ಖೇದಕರವಾಗಿದೆ.
ಶಿವಮೊಗ್ಗದಲ್ಲಿ ಇರುವ ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮವು ಈ ಪ್ರದೇಶದ ಅಭಿವೃದ್ಧಿಗೆ ನಾನಾ ಯೋಜನೆಗಳನ್ನು ಹಮ್ಮಿಕೊಂಡಿದೆ. 17 ಸೈಟ್ಗಳು ಖಾಲಿ ಇವೆ.
ಈ ಪ್ರದೇಶ ವ್ಯಾಪ್ತಿಯಲ್ಲಿ ಕುರುಚಲು ಗಿಡಗಳು ಆವರಿಸಿಕೊಂಡಿದೆ. ಬೀದಿ ದೀಪಗಳು ಪ್ರಜ್ವಲಿಸದೇ ರಾತ್ರಿ ವೇಳೆಯಲ್ಲಿ ಬರೀ ಕತ್ತಲು ಆವರಿಸಿದೆ. ಅಲ್ಲಲ್ಲಿ ನೆಟ್ಟು ಬೆಳೆಸಿರುವ ಆಕೇಶಿಯಾ ಮರಗಳು ರಸ್ತೆಯನ್ನೇ ಕಬಳಿಸಿಕೊಂಡಿದೆ. ಇವೆಲ್ಲವು ಕುಡುಕರ, ಕಾಮಿಗಳ ಪಾಲಿಗೆ ವರಭೂಮಿಯಾಗಿ ಮಾರ್ಪಟ್ಟಿದೆ.ಕಾರ್ಕಳ ಬ್ರಿಗೇಡ್ನಿಂದ ಸಾಮಾಜಿಕ ಸತ್ಕಾರ್ಯ:
ಕಾರ್ಕಳ ಬ್ರಿಗೇಡ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರು ಕಳೆದ ಕೆಲ ದಿನಗಳ ಹಿಂದೆ ಸಣ್ಣ ಕೈಗಾರಿಕಾ ವಲಯದಲ್ಲಿ ಸ್ವಚ್ಚತೆಗೆ ಒತ್ತು ಸಮಾಜಮುಖಿ ಸತ್ಕಾರ್ಯ ನಡೆಸಿದ್ದರು.
ಶುಚಿತ್ವ ಕಾರ್ಯದಲ್ಲಿ ತೊಡಗಿದ ಕಾರ್ಯಕರ್ತರಿಗೆ ಅಲ್ಲಿ ದೊರೆತ್ತಿರುವುದು ಮದ್ಯದ ಬಾಟಲುಗಳು. ಪಡ್ಡೆಗಳು ತಮ್ಮ ತೀಟೆಗಾಗಿ ಇದೇ ಪ್ರದೇಶವನ್ನು ಬಳಸುತ್ತಿದ್ದು, ಕುಡಿದು ಬಿಸಾಡಿದ ಮದ್ಯದ ಬಾಟಲುಗಳು ಹಲವು ಗೋಣಿಗಳಿಷ್ಟು ಇದ್ದವು. ಅನೈತಿಕ ವ್ಯವಹಾರವು ಇಲ್ಲ ಎಗ್ಗಿಲ್ಲದೇ ನಡೆಯುತ್ತಿದೆ ಎಂಬುವುದಕ್ಕೆ ಅಲ್ಲಿ ದೊರೆತ್ತಿದ್ದ ಕೆಲ ಪರಿಕರಗಳು ನಿದರ್ಶನವಾಗಿದೆ.ಮಿಯ್ಯಾರು-ಕೈಗಾರಿಕಾ ವಲಯ ರಸ್ತೆ ಅಭಿವೃದ್ಧಿಯಾಗಲಿ
-ವಿನ್ನಿಬೋಲ್ಡ್ ಮೆಂಡೋನ್ಸಾ ಪುರಸಭಾ ಸದಸ್ಯ
ಸಣ್ಣ ಕೈಗಾರಿಕಾ ವಲಯ, ತಾಲೂಕು ಕ್ರೀಡಾಂಗಣ, ಈಜುಕೊಳ, ಕೋಟಿಚೆನ್ನಯ್ಯ ಥ್ರೀ ಪಾರ್ಕ್ ಇವೆಲ್ಲವೂ ಒಂದೇ ಪರಿಸರದಲ್ಲಿ ಇವೆ.
ಈ ನಡುವೆ ಇದೇ ಪ್ರದೇಶದಲ್ಲಿ ಯಕ್ಷ ರಂಗಾಯಣ ಸ್ಥಾಪನೆಗೆ ಸಚಿವ ವಿ.ಸುನೀಲ್ ಕುಮಾರ್ ಮುಂದಾಗಿದ್ದಾರೆ. ಪ್ರವಾಸಿಗರ ಆಕರ್ಷಿಕ ಕೇಂದ್ರವಾಗಿ ಈ ಪ್ರದೇಶ ಮಾರ್ಪಡಾಗುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಮಿಯ್ಯಾರು ಹಾಗೂ ಕೈಗಾರಿಕಾ ವಲಯದ ಕೂಡು ರಸ್ತೆ ಅಭಿವೃದ್ಧಿ ಪಡಿಸಿದರೆ ಪರವೂರಿನ ಪ್ರವಾಸಿಗರಿಗೆ ಇಲ್ಲಿಗೆ ಅಗಮಿಸಿ ಪರಿಸರ ವೀಕ್ಷಿಸಲು ಅನುಕೂಲವಾಗಲಿದೆ.7 ವಿದ್ಯುತ್ ಕಬ್ಬಿಣದ ಕಂಬಗಳು ಪುರಸಭಾ ಅಧೀನದಲ್ಲಿ
-ರೂಪಾ ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ ಕಾರ್ಕಳ
ಸಣ್ಣಕೈಗಾರಿಕಾ ವಲಯದಲ್ಲಿ ಸಂಪೂರ್ಣವಾಗಿ ಹೊಸ ವಿದ್ಯುತ್ ಲೈನ್ ಅಳವಡಿಸುತ್ತಿದ್ದು, ಮೆಸ್ಕಾಂ ಇಲಾಖೆಯ ಕೋರಿಕೆಯಂತೆ 7 ವಿದ್ಯುತ್ ಕಬ್ಬಣದ ಕಂಬಗಳನ್ನು ಅಲ್ಲಿಂದ ತೆರವು ಗೊಳಿಸಿ ಪುರಸಭಾ ಅಧೀನಕ್ಕೆ ತೆಗೆದುಕೊಂಡಿದೆ. ಅಗತ್ಯ ವೆನಿಸಿದ ಕಡೆಗಳಲ್ಲಿ ಆ ಕಂಬಗಳನ್ನು ಸದ್ಬಾಳಕೆ ಮಾಡಲಾಗುತ್ತದೆ.
ಉದ್ಯೋಗ ಸೃಷ್ಠಿಯೇ ಮೂಲ ಉದ್ದೇಶ
-ರವಿ, ಸಹಾಯಕ ಪ್ರಧಾನ ವ್ಯವಸ್ಥಾಪಕ
ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ
ಉದ್ಯೋಗ ಸೃಷ್ಠಿಯ ಮೂಲ ಉದ್ದೇಶದಿಂದ ಕೈಗಾರಿಕಾ ವಲಯವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಒಂದು ಕೈಗಾರಿಕೆ ಸ್ಥಾಪನೆಯಿಂದ ಹತ್ತಾರು ಮಂದಿಗೆ ಉದ್ಯೋಗ ಲಭಿಸಲಿದೆ. ಪ.ಜಾ ಮತ್ತು ಪ.ವರ್ಗದವರಿಗೆ ನಿವೇಶನ ಮೌಲ್ಯದ ಮೇಲೆ ಶೇ.೭೫ರಷ್ಟು ವಿನಾಯತಿ ನೀಡಲಾಗುತ್ತದೆ. ಉಳಿದ ಶೇ.25 ರಷ್ಟು ಮೊತ್ತವನ್ನು 8ಕಂತುಗಳಲ್ಲಿ ಪಾವತಿಸಬಹುದು. ಅಲ್ಪಸಂಖ್ಯಾತ, ಪ್ರವೇಧ 1,2 ನೇ ವರ್ಗದವರಿಗೆ ನಿವೇಶನದ ಮೌಲ್ಯವನ್ನು 6 ಕಂತುಗಳಲ್ಲಿ ಪಾವತಿಸಲು ಅವಕಾಶ ಇದೆ. ಸಾಮಾನ್ಯ ವರ್ಗದವರಿಗೆ ನಿವೇಶನ ಮೌಲ್ಯವನ್ನು 60 ದಿನಗಳಲ್ಲಿ ಪಾವತಿಸುವುದಕ್ಕೆ ಅವಕಾಶ ನೀಡಲಾಗಿದೆ.