ಉಡುಪಿ, ಜ. 16 (DaijiworldNews/SM): ಇಲ್ಲಿನ ಶ್ರೀ ಕೃಷ್ಣಾಪುರ ಮಠದ ಪರ್ಯಾಯೋತ್ಸವವನ್ನು ಸರಳವಾಗಿ ಆಚರಿಸಲು ಸಮಿತಿ ನಿರ್ಧಾರ ಕೈಗೊಳ್ಳಲಾಗಿದೆ.
ಜ.18ರ ಮುಂಜಾನೆ ಪರ್ಯಾಯೋತ್ಸವ ಸಮಾರಂಭ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ದರ್ಬಾರು ಸಭೆಯು ಸರಳವಾಗಿ ನಡೆಸಲು ತೀರ್ಮಾನ ನಡೆಸಲಾಗಿದೆ ಎಂದು ಕಾರ್ಯಾಧ್ಯಕ್ಷ ಕೆ ರಘುಪತಿ ಭಟ್ ಘೋಷಣೆ ಮಾಡಿದ್ದಾರೆ.
ಶ್ರೀ ಕೃಷ್ಣಾಪುರ ಪರ್ಯಾಯೋತ್ಸವ ಸಮಿತಿ ಪ್ರಮುಖರ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಸರಕಾರದ ಮುನ್ನೆಚ್ಚರಿಕಾ ಕ್ರಮಕ್ಕೆ ಪೂರ್ಣ ಸಹಕಾರ ನೀಡಲಾಗುವುದು. ಕೇವಲ ಸಾಂಪ್ರದಾಯಿಕ ಪರ್ಯಾಯೋತ್ಸವ ಮೆರವಣಿಗೆ ನಡೆಯಲಿದೆ. ಭಕ್ತರು ಸಹಕರಿಸುವಂತೆ ಸ್ವಾಗತ ಸಮಿತಿ ಮನವಿ ಮಾಡಿಕೊಂಡಿದೆ. ಮೆರವಣಿಗೆಯಲ್ಲಿ ಜಾನಪದ ತಂಡಗಳು, ಟ್ಯಾಬ್ಲೋಗಳನ್ನು ರದ್ದು ಮಾಡಲಾಗಿದೆ.
ಅಷ್ಟ ಮಠಾಧೀಶರು ಕುಳಿತುಕೊಳ್ಳುವ ಮೇನೆ ಹೊತ್ತ ವಾಹನಗಳು, ವಾದ್ಯ ಚಂಡೆ , ಡೋಲು , ಬಿರುದಾವಳಿ, ಕೇವಲ ಪೌರಾಣಿಕ ದೃಶ್ಯಾವಳಿಗಳನ್ನೊಳಗೊಂಡ ಟ್ಯಾಬ್ಲೋ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಪರ್ಯಾಯ ದರ್ಬಾರ್ ಸಭೆಯಲ್ಲೂ ಸೀಮಿತ ಸಂಖ್ಯೆಯ ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎರಡು ಕೋವಿಡ್ ಲಸಿಕೆಗಳನ್ನು ಪಡೆದವರಿಗೆ ಮಾತ್ರ ಭಾಗವಹಿಸಲು ಅವಕಾಶ ಎಂದು ಸಮಿತಿ ಸ್ಪಷ್ಟಪಡಿಸಿದೆ.