ಉಡುಪಿ, ಡಿ 06(SM): ಜಿಲ್ಲೆಯಲ್ಲಿ ಮರಳುಗಾರಿಕೆಯನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದ್ದು ಮರಳಿಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಆದರೆ, ಉಡುಪಿಯ ಬೆಳ್ವೆಯಲ್ಲಿ ಟಿಪ್ಪರ್ ಗಳಲ್ಲಿ ಅಕ್ರಮವಾಗಿ ಲೋಡ್ ಗಟ್ಟಲೇ ಮರಳು ಸಾಗಾಟ ಮಾಡಲಾಗುತ್ತಿದೆ.
ಈ ಬಗ್ಗೆ ಸಾರ್ವಜನಿಕರು ಗಣಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಕಾಳ ಸಂತೆಯಲ್ಲಿ ಸುಮಾರು ಇಪ್ಪತೈದರಿಂದ ಮೂವತ್ತು ಸಾವಿರ ರೂಪಾಯಿಗಳಿಗೆ ಮರಳನ್ನು ಮಾರಲಾಗುತ್ತಿದೆ.
ಈ ಮರಳು ಮಾಫಿಯಾದಲ್ಲಿ ಗಣಿ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಅನ್ನುವ ಅರೋಪಗಳು ಕೂಡ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ಈ ಬಗ್ಗೆ ದೂರನ್ನು ನೀಡಲು ಮುಂದಾದವರಿಗೆ ಬೆದರಿಕೆ ಹಾಕಿ ಗೂಂಡಾ ವರ್ತನೆ ತೋರಿಸಿರುವ ಪ್ರಕರಣವೂ ನಡೆದಿದೆ.
ಅಕ್ರಮ ದಂಧೆಕೋರರು ಬೆಳ್ವೆ ಭಾಗದಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೆ ರಾಜರೋಷವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದು ಜಿಲ್ಲಾಧಿಕಾರಿಗಳು ಕೂಡಲೇ ದಂಧೆಕೋರರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.