ಮಂಗಳೂರು, ಜ 16 (DaijiworldNews/MS): ಗಣರಾಜ್ಯೋತ್ಸವ-ಪರೇಡ್ಗಾಗಿ ಕೇರಳ ಕಳುಹಿಸಿದ್ದ ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಟ್ಯಾಬ್ಲೋ ವಿನ್ಯಾಸವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಖಂಡನೀಯ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಜ. 16 ರ ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಮಾನಾಥ ರೈ, " ಗಣರಾಜ್ಯೋತ್ಸವ ಪಥಸಂಚಲನಕ್ಕೆ ಕೇಂದ್ರ ಸರಕಾರವು ಮಹಾನ್ ದಾರ್ಶನಿಕ ಶ್ರೀನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿರುವುದು ಖಂಡನೀಯ. ಶ್ರೀನಾರಾಯಣ ಗುರುಗಳು ಮಹಾನ್ ದಾರ್ಶನಿಕ, ಆಧ್ಯಾತ್ಮಿಕ ದಾರ್ಶನಿಕರು ಮತ್ತು ಸಮಾಜ ಸುಧಾರಕರು. ಮೇಲ್ಜಾತಿಯಿಂದ ತುಳಿತಕ್ಕೊಳಗಾದ, ಹಿಂದುಳಿದ ವರ್ಗದವರಿಗೆ ಮೇಲೆ ನಡೆಯುತ್ತಿದ್ದ ಜಾತಿ ವ್ಯವಸ್ಥೆ, ಅನ್ಯಾಯ, ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಡಿದವರು. ಶ್ರೀ ನಾರಾಯಣ ಗುರುಗಳು 'ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು' ಎಂಬ ಸಿದ್ಧಾಂತವನ್ನು ಬೋಧಿಸಿದರು. ಶ್ರೀ ನಾರಾಯಣ ಗುರುಗಳಿಗೆ ಕೋಟಿಗಟ್ಟಲೆ ಅನುಯಾಯಿಗಳು ಮತ್ತು ಭಕ್ತರಿದ್ದಾರೆ. ಅವರ ಸ್ತಬ್ದಚಿತ್ರವನ್ನು ತಿರಸ್ಕರಿಸಿ, ಕೇಂದ್ರ ಸರ್ಕಾರವು ಮಹಾನ್ ದಾರ್ಶನಿಕ ಮತ್ತು ಅವರ ಸಿದ್ದಾಂತವನ್ನು ಅವಮಾನಿಸಿದೆ "ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಸಮಾನತೆಯನ್ನು ತರಲು ಶ್ರಮಿಸಿದ ಹಿಂದೂ ಸಮಾಜ ಸುಧಾರಕ ಹಾಗೂ ದೇವಾಲಯಗಳನ್ನು ನಿರ್ಮಿಸುವ ಮೂಲಕ ಅವರು ಹಿಂದುಳಿದ ವರ್ಗಗಳಿಗೆ ಆಧ್ಯಾತ್ಮಿಕ ಮಾರ್ಗವನ್ನು ಪಡೆಯಲು ಅವಕಾಶ ಮಾಡಿಕೊಟ್ಟ ಮಾರ್ಗದರ್ಶಕ ನಾರಾಯಣ ಗುರುಗಳ ಟ್ಯಾಬ್ಲೋವನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರದ ನಡೆ ನಿಜಕ್ಕೂ ನೋವಿನ ಸಂಗತಿಯಾಗಿದ್ದು ಇದು ಕೇಂದ್ರ ಸರ್ಕಾರದ ಅಕ್ಷಮ್ಯ ಅಪಮಾನ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅವರ ಜನ್ಮ ದಿನಾಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠವನ್ನು ಸ್ಥಾಪಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಮಹಾನ್ ದಾರ್ಶನಿಕನಿಗೆ ಮಾಡಿರುವ ಇಂತಹ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ.
ಭವಿಷ್ಯದಲ್ಲಿ ಕಾಂಗ್ರೆಸ್, ವಿವಿಧ ಕಾರ್ಯಕ್ರಮಗಳ ರೂಪುರೇಷೆಗಳನ್ನು ರಚಿಸಿ, ಪ್ರತಿಭಟನೆಗಳ ಮೂಲಕ ಇಂತಹ ಅನ್ಯಾಯಗಳ ವಿರುದ್ಧ ಹೋರಾಟ ಮಾಡಲಾಗುವುದು. ಈ ವಿಚಾರವಾಗಿ ಕಾಂಗ್ರೆಸ್ ನಿಯೋಗವು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ಹೇಳಿದರು.