ಮಂಗಳೂರು, ಜ 16 (DaijiworldNews/MS): ಮನೆಯ ಮುಂಭಾಗದ ಅಂಗಳದಲ್ಲಿ ನಿಂತಿದ್ದ ವಯೋವೃದ್ಧರೊಬ್ಬರಿಗೆ ಹಿಮ್ಮುಖವಾಗಿ ಬಂದ ಪಿಕ್ಅಪ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.
ನಗರದ ಶಕ್ತಿನಗರದ ಕಕ್ಕೆಬೆಟ್ಟು ಕಾರ್ಮಿಕ ಕಾಲೋನಿಯಲ್ಲಿ ಜನವರಿ 15ರ ಶನಿವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ.ಮೃತರನ್ನು ಕೊರಗಪ್ಪ (85) ಎಂದು ಗುರುತಿಸಲಾಗಿದೆ.
ಮೃತರು ಮನೆಯ ಅಂಗಳದ ಮುಂಭಾಗ ನಿಂತಿದ್ದು, ಈ ವೇಳೆ ಮೋಹನ್ ಎಂಬವರು ಚಲಾಯಿಸುತ್ತಿದ್ದ ಫ್ಲೋರಿಂಗ್ ಟೈಲ್ಸ್ ತುಂಬಿಕೊಂಡ ಪಿಕ್ ಅಪ್ ನ್ನು ನಿರ್ಲಕ್ಷ್ಯವಾಗಿ ಹಿಂಬದಿ ಗಮನಿಸದೆ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಕೊರಗಪ್ಪ ಅವರಿಗೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯಾಗಿ ಬಿದ್ದ ರಭಸಕ್ಕೆ ಕೊರಗಪ್ಪ ಅವರ ತಲೆಗೆ ಗಾಯವಾಗಿದೆ. ತಕ್ಷಣ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಈ ಸಂಬಂಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.