ಉಡುಪಿ, ಜ 15 (DaijiworldNews/HR): ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಮಾಡಿ ಹೊರಡಿಸಿರುವ ಕರ್ನಾಟಕ ಸರಕಾರದ ಆದೇಶ ಇದೀಗ ಅತಿಥಿ ಉಪನ್ಯಾಸಕರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಕರ್ನಾಟಕ ಸರಕಾರವು ಜನವರಿ 14 ರಂದು ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಗೊಳಸಿ ಆಧೇಶವನ್ನು ಹೊರಡಿಸಿತ್ತು, ಆದರೆ ಈ ಆದೇಶ ಇದೀಗ ಅತಿಥಿ ಉಪನ್ಯಾಸಕರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ ಎಂದು ಉಡುಪಿ ಜಿಲ್ಲೆಯ ಅತಿಥಿ ಉಪನ್ಯಾಸಕರು ಅಳಲನ್ನು ತೊಡಿಕೊಂಡಿದ್ದಾರೆ.
ಈ ಕುರಿತು ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಕುಂದಾಪುರ ತಾಲ್ಲೂಕು ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ್ಯರಾದ ಮಣಿಕಂಠ, "ನಿನ್ನೆಯ ದಿನ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ 7 ಸಾವಿರ ಅತಿಥಿ ಉಪನ್ಯಾಸಕರ ವೇತನವನ್ನು ಏರಿಕೆ ಮಾಡಲಾಗಿದೆ ಎಂದು ಘೋಷಿಸಿದ್ದರು. ಆದರೆ ರಾಜ್ಯದಲ್ಲಿ ನಾವು ಸುಮಾರು 14 ಸಾವಿರ ಅತಿಥಿ ಶಿಕ್ಷಕರು ಇದ್ದು, ಅರ್ಧಕ್ಕಿಂತ ಮಿಕ್ಕಿ ಅತಿಥಿ ಶಿಕ್ಷಕರನ್ನು ವೇತನ ಏರಿಕೆಯಲ್ಲಿ ಕೈ ಬಿಡಲಾಗಿದೆ. ಇದರೊಂದಿಗೆ ನೂತನ ಆದೇಶದಲ್ಲಿ 16 ಗಂಟೆ ತರಗತಿಗಳನ್ನು ತೆಗೆದುಕೊಳ್ಳಲು ಆದೇಶಿಸಲಾಗಿದೆ. 16 ಗಂಟೆ ತರಗತಿ ನಡೆಸಿ ವೇತನ ಏರಿಕೆ ಮಾಡಲಾಗಿದೆ. ಇದರ ಪ್ರಕಾರ ಇಬ್ಬರು ಅತಿಥಿ ಶಿಕ್ಷಕರ ತರಗತಿಗಳನ್ನು ಇನ್ನು ಮುಂದೆ ಒಬ್ಬರೇ ತೆಗೆದುಕೊಳ್ಳಬೇಕಾಗುತ್ತದೆ. ಈ ಆದೇಶದ ಮೂಲಕ ಸರಕಾರ ನಮ್ಮನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ನಾವು ಸೇವಾ ಭದ್ರತೆಯನ್ನು ಕೋರಿದ್ದೆವು ಆದರೆ ಇದರ ಕುರಿತು ಸರಕಾರ ಯಾವುದೇ ಚಕಾರ ಎತ್ತಿಲ್ಲ. ಇತ್ತೀಚಿಗಷ್ಟೆ ನಮ್ಮನ್ನು ಸರಕಾರ ನೇಮಕಾತಿ ಮಾಡಿ ಆದೇಶ ನೀಡಿತ್ತು, ಆದರೆ ಇದೀಗ ಮತ್ತೆ ಸೋಮವಾರದಿಂದ ನಾವು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ನೇಮಕಾತಿಯನ್ನು ಪಡೆದುಕೊಳ್ಳಬೇಕಾಗಿ ಬಂದಿದೆ. ಇದರ ಮೂಲಕ ಸರಕಾರ ನಮ್ಮ ಹೊಟ್ಟೆಗೆ ತಣ್ಣಿರು ಬಟ್ಟೆ ಹಾಕಿದೆ. ತಕ್ಷಣವೇ ಸರಕಾರ ಈ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅದ್ಯಕ್ಷ್ಯೆ ಡಾಕ್ಟರ್ ಶಾಹಿದಾ ಜಹಾನ್ ಮಾತನಾಡಿ, "ಕೇವಲ 7 ಸಾವಿರ ಅತಿಥಿ ಉಪನ್ಯಾಸಕರಿಗೆ ಮಾತ್ರ ವೇತನ ಏರಿಕೆ ಮಾಡುವ ಮೂಲಕ ಕಳೆದ ಹಲವಾರು ದಿನಗಳಿಂದ ನಡೆಯುತಿದ್ದ ನಮ್ಮ ಪ್ರತಿಭಟನೆಗೆ ಸರಕಾರ ಒಡೆದು ಆಳುವ ನೀತಿಯ ಮೂಲಕ ಬಿರುಕು ಮೂಡಿಸುವ ಪ್ರಯತ್ನವನ್ನು ಮಾಡಿದೆ. ಈಗಾಗಲೇ ಸರಕಾರದ ಸಮಸ್ಯೆಯಿಂದಾಗಿ ಹಲವಾರು ಮಂದಿ ಅತಿಥಿ ಉಪನ್ಯಾಸಕರುಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 7 ಸಾವಿರ ಉಪನ್ಯಾಸಕರಿಗೆ ಸಿಹಿ ನೀಡಿ ಉಳಿದ 7 ಸಾವಿರ ಉಪನ್ಯಾಸಕರಿಗೆ ಕಹಿ ನೀಡಿ ಸರಕಾರ ಮನೆಗೆ ಕಳುಹಿಸಿದೆ. 7 ಸಾವಿರ ಅತಿಥಿ ಉಪನ್ಯಾಸಕರು ಗಲ ಕುಟುಂಬವನ್ನು ಬೀದಿಗೆ ತರುವ ಪ್ರಯತ್ನವನ್ನು ಸರಕಾರ ಮಾಡಿದೆ. ನಮಗೆ ವರ್ಷದ 12 ತಿಂಗಳು ಕೂಡಾ ವೇತನದ ಜೊತೆಗೆ ಸೇವಾಭದ್ರತೆಯನ್ನು ಸರಕಾರ ನೀಡಬೇಕು. ಉಪನ್ಯಾಸಕ ಅರ್ಹತಾ ಪರೀಕ್ಷೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಕೃಪಾಂಕ ನೀಡಬೇಕು" ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಅತಿಥಿ ಉಪನ್ಯಾಸಕರುಗಳಾದ ಸುಜಾತ, ವಿನಯ ಚಮದ್ರ, ಗುರುರಾಜ್, ವೇದ ಉಪಸ್ಥಿತರಿದ್ದರು.