ಕಾರ್ಕಳ, ಜ 15 (DaijiworldNews/PY): "ಸಹಕಾರ ಭಾರತಿ ಸಂಘಟನೆ ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದ ಜೊತೆಗೆ ಸಹಕಾರಿ ಕ್ಷೇತ್ರದ ಶುದ್ಧೀಕರಣ, ಅಭಿವೃದ್ಧಿ ಕರಣ ಮತ್ತು ಆಧುನೀಕರಣಕ್ಕೆ ಸಂಘಟನಾತ್ಮಕ ರಚನಾತ್ಮಕ, ಆಂದೋಲನ ತ್ಮಕ ಮತ್ತು ಪ್ರಾತಿನಿಧ್ಯಾತ್ಮಕ ವಾಗಿ ರಾಷ್ಟ್ರವ್ಯಾಪಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ" ಎಂದು ಸಹಕಾರ ಭಾರತಿ ಉಡುಪಿ ಜಿಲ್ಲಾ ಮಿಲ್ಕ್ ಪ್ರಕೋಷ್ಠದ ಪ್ರಮುಖರು ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ಹೇಳಿದರು.
ಅಜೆಕಾರು ರಾಮಮಂದಿರದಲ್ಲಿ ಜನವರಿ 14 ಶುಕ್ರವಾರದಂದು ಜರುಗಿದ ಕಾರ್ಕಳ ತಾಲೂಕು ಸಹಕಾರ ಭಾರತಿ ಸಂಸ್ಥಾಪಕರ ದಿನಾಚರಣೆಯಲ್ಲಿ ಮಾತನಾಡಿದರು.
"ಸಹಕಾರ ಭಾರತಿ ಸಂಸ್ಥಾಪಕ ಲಕ್ಷ್ಮಣ್ ರಾವ್ ಇನಾಮ್ದಾರ್ರವರ ದೂರದರ್ಶಿತ್ವ ಪರಿಶ್ರಮ ಮತ್ತು ಪ್ರಾಮಾಣಿಕತೆಯ ಫಲಸ್ವರೂಪವಾಗಿ ಸಹಕಾರ ಭಾರತಿ ದೇಶದ 27 ರಾಜ್ಯಗಳ 650ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಘಟನಾತ್ಮಕವಾಗಿ ಬಲವಾಗಿ ಬೇರೂರಿದೆ. ಸಹಕಾರ ಭಾರತಿ ನಿರಂತರವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಜೊತೆಗೆ ಸಮಾಲೋಚನೆ ನಡೆಸಿ ಸಹಕಾರ ಕ್ಷೇತ್ರದ ಕಾಯ್ದೆಗಳ ಸರಳೀಕರಣ, ವ್ಯವಸ್ಥೆಯಲ್ಲಿ ಆಧುನೀಕರಣ, ಆಡಳಿತದಲ್ಲಿ ಪಾರದರ್ಶಕತೆ ಗೆ ಹಲವಾರು ಸುಧಾರಣೆಗಳನ್ನು ತರುವಲ್ಲಿ ನಿರಂತರವಾಗಿ ಕಾರ್ಯಪ್ರವೃತ್ತವಾಗಿದೆ" ಎಂದರು.
ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಭವಾನಿ ಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು.
ಉಡುಪಿ ಜಿಲ್ಲಾ ಸಹಕಾರ ಭಾರತಿಯ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಾತನಾಡಿ, ಸಹಕಾರ ಭಾರತಿಯ ಸದಸ್ಯತಾ ಅಭಿಯಾನ, ಸಂಘಟನಾತ್ಮಕ ವಿಚಾರಗಳು ಮತ್ತು ತಳಮಟ್ಟದಲ್ಲಿ ಇನ್ನಷ್ಟು ಭದ್ರವಾಗಿ ಸಂಘಟನೆಯನ್ನು ಕಟ್ಟಿ ಬೆಳೆಸಬೇಕಾದ ಅವಶ್ಯಕತೆಯ ಬಗ್ಗೆ ಸವಿವರ ಮಾಹಿತಿ ನೀಡಿದರು.
ಕ್ಯಾಮ್ಕೋ ನಿರ್ದೇಶಕ ದಯಾನಂದ ಹೆಗಡೆ, ಸಹಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷ ಮಧುಸೂದನ್ ನಾಯಕ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾರ್ಕಳ ಸಹಕಾರ ಭಾರತೀಯ ಅಧ್ಯಕ್ಷ ಹರೀಶ್ ಕಲ್ಯಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಕಡ್ತಲ ಪರಿಸರದ ಹಿರಿಯ ಸಹಕಾರಿ ರಾಮಚಂದ್ರ ನಾಯಕ್ ಮತ್ತು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಬೋಳ ಸದಾಶಿವ ಶೆಟ್ಟಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಸಹಕಾರ ಭಾರತಿಯ ಉಡುಪಿ ಜಿಲ್ಲಾ ಮಹಿಳಾ ಪ್ರಮುಖ್ ಮತ್ತು ಅಜೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶ್ರೀಮತಿ ವಿದ್ಯಾ ಪೈ ನಿರೂಪಿಸಿದರು. ನಿರ್ದೇಶಕ ಪ್ರಶಾಂತ ಶೆಟ್ಟಿ ಧನ್ಯವಾದವಿತಯ್ತರು.