ಪುತ್ತೂರು, ಜ 15 (DaijiworldNews/MS): ಉದ್ಯಮಿಯೊಬ್ಬರಿಗೆ ದೂರವಾಣಿ ಮೂಲಕ ಹಣದ ಬೇಡಿಕೆ ಇಟ್ಟು, ಬೆದರಿಕೆ ಕರೆ ಮಾಡಿ, ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ರೌಡಿ ಶೀಟರ್ ಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಮಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಜೈಲಿನಲ್ಲಿರುವ ವ್ಯಕ್ತಿಯನ್ನು ಬಿಡುಗಡೆ ಮಾಡಲು ಹಣ ನೀಡುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.
ಹಣ ನೀಡದಿದ್ದರೆ, ನಿನ್ನನ್ನು ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ. ನಿನ್ನ ಮಕ್ಕಳ ಜೀವನ ಹಾಳು ಮಾಡುತ್ತೇನೆ. ಈ ವಿಚಾರ ಯಾರಿಗಾದರೂ ತಿಳಿಸಿದರೆ ಹತ್ಯೆ ನಡೆಸುವುದಾಗಿ ಆರೋಪಿ ಬೆದರಿಕೆ ಹಾಕಿರುವ ಕುರಿತು ಪೊಲೀಸರು ಐಪಿಸಿ ಸೆಕ್ಷನ್ 504, 506, 507 ಮತ್ತು 387 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಉದ್ಯಮಿಯಿಂದ ಹಣ ಪಡೆದುಕೊಳ್ಳುವ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಮಸೀದಿ ಬಳಿ ಕಲಂದರ್ ಶರೀಫ್ ಅಲಿಯಾಸ್ ಶಾಫಿ ಹಾಗೂ ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದ ಕುಚ್ಚಿಗುಡ್ಡೆ ಮನೆ ನಿವಾಸಿ ಹಸನಬ್ಬ ಅಲಿಯಾಸ್ ಹಸನ್ @ಅಚ್ಚು @ ಅಚುನ್ ಎಂಬ ಇಬ್ಬರುಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಯಿಂದ 50,000 ರೂಪಾಯಿ ನಗದು, ಕಾರು ಮತ್ತು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಕಲಂದರ್ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದಾನೆ. ಹಸನಬ್ಬ ವಿರುದ್ದ ಮಂಗಳೂರು ನಗರ ಠಾಣೆಯ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಹಾಗೂ ಉಳ್ಳಾಲ ಮತ್ತು ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಖುಷಿಕೇಶ್ ಸೋನಾವಾಣೆ ಮತ್ತು ಪುತ್ತೂರು ಉಪ ವಿಬಾಗ ಪೊಲೀಸ್ ಉಪಾಧೀಕ್ಷಕರಾದ ಡಾ ಗಾನ ಪಿ ಕುಮಾರ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಗೆ ರವರ ನೇತೃತ್ವದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರುಗಳಾದ ಉದಯರವಿ ಎಂ.ವೈ, ಅಮೀನ್ ಸಾಬ್ ಎಂ ಅತ್ತಾರ್, ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ಪ, ದೇವರಾಜ್, ಅದ್ರಾಮ, ಪ್ರವೀಣ್ ರೈ, ಹರ್ಷಿತ್, ಗಾಯತ್ರಿ, ವಿನೋದ್, ರವರು ಬಾಗವಹಿಸಿರುತ್ತಾರೆ. ಜಿಲ್ಲಾ ಗಣಕಯಂತ್ರ ವಿಬಾಗದ ಸಂಪತ್, ದಿವಾಕರ್ ರವರು ಸಹಕರಿಸಿರುತ್ತಾರೆ.