ಪಡುಬಿದ್ರೆ, ಜ 15 (DaijiworldNews/MS): ಛಿದ್ರಛಿದ್ರವಾಗಿ ಹಳಿ ಮೇಲೆ ಚದುರಿ ಹೋಗಿರುವ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಪಡುಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜೂರು ಗ್ರಾಮದ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಅದಮಾರು ನಿವಾಸಿ ರಾಜೇಶ್ ಶೆಟ್ಟಿ(39) ಎಂದು ಗುರುತಿಸಲಾಗಿದೆ.
ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಾಜೇಶ್ ಶೆಟ್ಟಿ ಶುಕ್ರವಾರ ಬೆಳಗ್ಗೆ ಮನೆಯಿಂದ ಬೈಕ್ನಲ್ಲಿ ಹೊರಟಿದ್ದು, ಮಧ್ಯಾಹ್ನ ವೇಳೆ ಕುಂಜೂರು ಗ್ರಾಮದ ರೈಲು ಹಳಿ ಬಳಿ ನಿಲ್ಲಿಸಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಮುಂಬೈಯಲ್ಲಿದ್ದ ರಾಜೇಶ್ ಶೆಟ್ಟಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾಗಿದ್ದು, ವಾರದ ಹಿಂದೆಯಷ್ಟೇ ಊರಿಗೆ ವಾಪಾಸಾಗಿದ್ದರು. ಮನೋರೋಗಕ್ಕೆ ಚಿಕಿತ್ಸೆಯನ್ನೂ ಪಡೆದಿದ್ದ ಅವರು ಸೂಕ್ತವಾದ ಉದ್ಯೋಗ ಸಿಗದ ಕಾರಣ ಚಿಂತೆಗೀಡಾಗಿದ್ದು, ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.