ಮಂಗಳೂರು,ಜ 15 (DaijiworldNews/MS): ಕಡಲ ನಗರಿಯಲ್ಲಿ ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿಯಿಂದಲೇ ಆರಂಭವಾಗಿದ್ದು, ಜನರ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕರ್ಫ್ಯೂ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ನಗರಾದ್ಯಂತ ವಾಹನ ತಪಾಸಣೆ ಚುರುಕುಗೊಳಿಸಲಾಗಿದೆ.
ಕ್ಲಾಕ್ ಟವರ್, ಕೆಪಿಟಿ ಸೇರಿ 36 ಕಡೆ ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ. ಅನಗತ್ಯ ಓಡಾಡುವ ವಾಹನ, ಮಾಸ್ಕ್ ಹಾಕದ ಸವಾರರಿಗೆ ದಂಡ ವಿಧಿಸಲಾಗುತ್ತಿದೆ.
ವೀಕೆಂಡ್ ಕರ್ಫ್ಯೂ ಜಾರಿಗೊಂಡರೂ ಹಣ್ಣು-ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಅಷ್ಟಿಲ್ಲ. ಜಿಲ್ಲೆಯಲ್ಲಿ ಖಾಸಗಿ, ಸರ್ಕಾರಿ ಬಸ್ ಸಂಚಾರ ಯಥಾಸ್ಥಿತಿಯಿದೆ. ಬಸ್ಗಳಲ್ಲಿ ಬೆರಳೆಣಿಕೆ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಕ್ಲಾಕ್ ಟವರ್ ಸರ್ಕಲ್ನಲ್ಲಿ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸ್ತಿದ್ದು, ಬಸ್ಸು, ಕಾರು, ದ್ವಿಚಕ್ರ ವಾಹನ ತಡೆದು ಮಾಸ್ಕ್ ಇಲ್ಲದವರಿಗೆ ಫೈನ್ ಹಾಕ್ತಿದ್ದಾರೆ. ಖಾಸಗಿ ಬಸ್ ಚಾಲಕರು, ನಿರ್ವಾಹಕರು, ಪ್ರಯಾಣಿಕರಿಗೂ ದಂಡ ವಿಧಿಸಲಾಗುತ್ತಿದೆ.
ದೂರದ ಊರುಗಳಿಗೆ ಹೋಗುವವರು, ಬಸ್, ರೈಲು ಅಥವಾ ವಿಮಾನ ಯಾನದ ಟಿಕೆಟ್ ನೊಂದಿಗೆ ಸಂಚರಿಸಲು ಅವಕಾಶವಿದೆ. ತೀರಾ ಕೌಟುಂಬಿಕ ಕಾರ್ಯಕ್ರಮಗಳನ್ನು ಸೀಮಿತ ಸಂಖ್ಯೆಯಲ್ಲಿ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ.