ವಿಟ್ಲ, ಜ 15 (DaijiworldNews/MS): ಹಾಸನದ ಚನ್ನರಾಯಪಟ್ಟಣದಲ್ಲಿ ಜ.14 ರ ಶುಕ್ರವಾರ ಕಾರು ಹಾಗೂ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಪುತ್ತೂರು ತಾಲೂಕಿನ ಈಶ್ವರಮಂಗಲದ ಹಾಗೂ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ನಿವಾಸಿ ಯುವಕರಿಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಪುತ್ತೂರು ತಾಲೂಕಿನ ಈಶ್ವರಮಂಗಲ ಸಮೀಪದ ಬಂಟಕಲ್ಲು ನಿವಾಸಿ, ಬೆಂಗಳೂರಿನ ಐಟಿ ಉದ್ಯೋಗಿ ದೇವಿಪ್ರಸಾದ್ ಶೆಟ್ಟಿ(30) ಮತ್ತು ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕೆಳಗಿನ ಬಾರೆಬೆಟ್ಟು ನಿವಾಸಿ, ಮುಡಿಪು ಇನ್ಪೋಸಿಸ್ ಉದ್ಯೋಗಿ ಸುದರ್ಶನ್(32) ಎಂದು ಗುರುತಿಸಲಾಗಿದೆ.
ಇವರಿಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಹಿಂದೇ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ದೇವಿಪ್ರಸಾದ್ ಶೆಟ್ಟಿ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದರು. ಕೊವೀಡ್ ಕಾರಣಕ್ಕೆ ಊರಿಗೆ ಬಂದ ದೇವಿಪ್ರಸಾದ್ ಬೆಂಗಳೂರಿನ ಐಟಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ದೇವಿಪ್ರಸಾದ್ ವಾರದ ಹಿಂದೆ ಕಾರೊಂದು ಖರೀದಿಸಿದ್ದರು. ಇನ್ಪೋಸಿಸ್ ಉದ್ಯೋಗಿಯಾಗಿರುವ ಇವರ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಹೆರಿಗೆಯ ಸಂದರ್ಭ ಜೊತೆಯಲ್ಲಿ ಇರಲೆಂದು ಊರಿಗೆ ಹೊರಟಿದ್ದರು. ದೇವಿಪ್ರಸಾದ್ ಗೆ ಸರಿಯಾಗಿ ಡ್ರೈವಿಂಗ್ ಬಾರದ ಹಿನ್ನಲೆಯಲ್ಲಿ ಸುದರ್ಶನ್ ಅವರನ್ನು ಕರೆಸಿಕೊಂಡಿದ್ದರು. ಬೈಕಿನಲ್ಲಿ ಊರಿಂದ ಬೆಂಗಳೂರಿಗೆ ತೆರಳಿದ್ದ ಸುದರ್ಶನ್ ಅದನ್ನು ಅಲ್ಲಿರಿಸಿ ಇಬ್ಬರೂ ಜೊತೆಯಾಗಿ ಊರಿಗೆ ಹೊರಟಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ. ಸುದರ್ಶನ್ ಅವರು ತಾಯಿ ಮತ್ತು ಮೂವರು ಸೋದರಿಯರನ್ನು ಅಗಲಿದ್ದಾರೆ.