ಮಲ್ಪೆ, ಜ 14 (DaijiworldNews/AN): ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬೈಲಕೆರೆ ನಿವಾಸಿ ಸ್ಟೀಫನ್ ರೋಡ್ರಿಗಸ್ ಪತ್ನಿ ವನಿತಾ ರೋಡ್ರಿಗಸ್ರ ಸಾವಿನ ಬಗ್ಗೆ ಅನುಮಾನಗಳಿದ್ದು, ತನಿಖೆ ನಡೆಸಬೇಕು ಎಂದು ಮಲ್ಪೆ ಠಾಣಾಧಿಕಾರಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.
ವನಿತಾ ರೋಡ್ರಿಗಸ್ರವರು ಡಿ.28 ರಂದು ಅನಾರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಡಿ.31 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇನ್ನು ವನಿತಾ ಅವರಿಗೆ ಪತಿ ಸ್ಟೀಫನ್ ಹಾಗೂ ಅತ್ತೆ ಮಾನಸಿಕ ಕಿರುಕುಳ ಹಾಗೂ ದೈಹಿಕ ಹಲ್ಲೆ ನೀಡುತ್ತಿದ್ದು, ಈ ಬಗ್ಗೆ ಠಾಣೆಗೆ ದೂರು ಕೂಡ ನೀಡಿದ್ದರು. ಜೊತೆಗೆ ತಾನು ಅನುಭವಿಸುತ್ತಿರುವ ನೋವಿನ ಬಗ್ಗೆ ಸ್ನೇಹಿತರಲ್ಲಿ ತಿಳಿಸಿದ್ದರು. ಹಾಗಾಗಿ ವನಿತಾ ಅವರ ತಲೆಗೆ ಬಿದ್ದ ಪೆಟ್ಟಿನಿಂದ ಅನಾರೋಗ್ಯಗೊಂಡಿರುವ ಬಗ್ಗೆ ಅನುಮಾನಗಳಿದ್ದು, ಇದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಲ್ಪೆ ಠಾಣಾಧಿಕಾರಿಯಲ್ಲಿ ಸ್ಥಳೀಯರು ಒತ್ತಾಯಿಸಿದ್ದಾರೆ.
ಇಂದು ನಡೆದ ಮಲ್ಪೆ ಠಾಣಾಧಿಕಾರಿಗಳಿಗೆ ಮನವಿ ನೀಡುವ ಕಾರ್ಯಕ್ರಮದಲ್ಲಿ ಬೈಲಕೆರೆಯ ಮಹಿಳೆಯರೊಂದಿಗೆ ತೆಂಕನಿಡಿಯೂರು ಪಂ.ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ , ಉಪಾಧ್ಯಕ್ಷರಾದ ಅರುಣ್ ಜತ್ತನ್ನ ಹಾಗೂ ಸದಸ್ಯರುಗಳು, ತೆಂಕನಿಡಿಯೂರು ಸಂಜೀವಿನಿ ಸಂಘದ ಅಧ್ಯಕ್ಷರಾದ ಸುಕನ್ಯಾ ಶೆಟ್ಟಿ ಹಾಗೂ ಸಂಘದ ಸದಸ್ಯರು ಬೈಲಕೆರೆ ಅಂಗನವಾಡಿ ಶಿಕ್ಷಕಿ ಸುನೀತ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಬೈಲಕೆರೆ ಸಮಸ್ತ ನಾಗರೀಕರು ಮಹಿಳೆಯರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.