ಕಾರ್ಕಳ, ಜ 14 (DaijiworldNews/PY): ಮಿಯಾರು ಕಜೆ ಪರಿಸರದ ಹೈನುಗಾರಿಕೆಯಲ್ಲಿ ತೊಡಗಿದ್ದ ಯಶೋಧಾ ಆಚಾರ್ಯ ಅವರ ಮನೆಯ ಹಟ್ಟಿಯಿಂದ ಕಳೆದ ಒಂದು ವರ್ಷದಲ್ಲಿ ಸತತ 16 ಗೋವುಗಳ ಕಳವಿನಿಂದ ತೀರಾ ಹತಾಶೆಗೊಂಡು ದುಃಖಿತರಾಗಿದ್ದು ಅವರ ಮನೆಗೆ ಸಹಕಾರಿ ಭಾರತಿ ನಿಯೋಗವು ಭೇಟಿ ನೀಡಿ ಸಾಂತ್ವನ ಹೇಳಿ 5000 ರೂ. ತುರ್ತು ಆರ್ಥಿಕ ನೆರವು ನೀಡಿ, ಧೈರ್ಯ ತುಂಬಿದೆ.
ಮಿಯಾರು ಕಜೆ ಪರಿಸರದ ನಿವಾಸಿ ಸುಧಾಕರ್ ಶೆಟ್ಟಿ ಮತ್ತು ನಿಟ್ಟೆ ಲೆಮಿನಾ ಕ್ರಾಸ್ ಬಳಿಯ ನಿವಾಸಿ ರಾಜೇಶ ಆಚಾರ್ಯ ಅವರ ಮನೆಗೂ ಭೇಟಿ ನೀಡಿ, ಗೋಕಳ್ಳರ ದುಷ್ಕೃತ್ಯದಿಂದ ಇಪ್ಪತ್ತಕ್ಕೂ ಹೆಚ್ಚಿನ ದನಗಳನ್ನು ಕಳೆದುಕೊಂಡಿರುವ ಕುಟುಂಬದವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಲಾಯಿತು.
ಉಡುಪಿ ಜಿಲ್ಲಾ ಸಹಕಾರ ಭಾರತೀಯ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೂತನ ನಿರ್ದೇಶಕ ಬೋಳ ಸದಾಶಿವ ಶೆಟ್ಟಿ ಇದೇ ಸಂದರ್ಭದಲ್ಲಿ ಮಾತನಾಡಿ, ಹಾಡಹಗಲೇ ಹಟ್ಟಿಯಿಂದ ಹಾಗೂ ಮೇಯುತ್ತಿರುವ ದನಗಳನ್ನು ಕದ್ದು, ಕಸಾಯಿಖಾನೆಗೆ ಸಾಗಿಸಿ, ಸಮಾಜಕ್ಕೆ ಮತ್ತು ಸರಕಾರಕ್ಕೆ ಸವಾಲು ಹಾಕುತ್ತಿರುವ ದನಗಳ್ಳರ ಕುಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಸಂತ್ರಸ್ತ ಮಹಿಳೆಗೆ ಮುಂದಿನ ದಿನಗಳಲ್ಲಿ ಹಾಲು ಒಕ್ಕೂಟ ಮತ್ತು ಸರಕಾರದ ವತಿಯಿಂದ ಹೆಚ್ಚಿನ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಸಹಕಾರ ಭಾರತೀಯ ನಿಯೋಗವು ಮುಂದಿನ ದಿನಗಳಲ್ಲಿ ಗೋಕಳ್ಳರ ಅಟ್ಟಹಾಸಕ್ಕೆ ಕಡಿವಾಣ ಹಾಕುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿ ನೀಡಿ ಕೂಡಲೇ ದನ ಕಳ್ಳರ ಜಾಲವನ್ನು ಭೇದಿಸಿ ಕಠಿಣ ಕಾನೂನು ಕ್ರಮಗಳ ಮೂಲಕ ಮಟ್ಟಹಾಕುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಸಹಕಾರ ಭಾರತಿಯ ಉಡುಪಿ ಜಿಲ್ಲಾ ಮಿಲ್ಕ್ ಪ್ರಕೋಷ್ಠದ ಸಂಚಾಲಕರು ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸಾಣೂರು ನರಸಿಂಹ ಕಾಮತ್, ಸಹಕಾರ ಭಾರತಿ ಕಾರ್ಕಳ ತಾಲೂಕಿನ ಪ್ರಧಾನ ಕಾರ್ಯದರ್ಶಿ ಸುದೀಪ್, ಮಿಯಾರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಕಾರ್ಯದರ್ಶಿ ಕಿಶೋರ್ ಜೊತೆಗಿದ್ದರು.