ಕುಂದಾಪುರ, ಜ 14 (DaijiworldNews/PY): "ಇಂದಿನ ವ್ಯವಸ್ಥೆಯಲ್ಲಿ ಯಾವುದೇ ಯೋಜನೆಯನ್ನೂ ಅನುಷ್ಠಾನಗೊಳಿಸುವುದು ತುಂಬಾ ಕಷ್ಟಕರ. ಈ ಬಗ್ಗೆ ಅಗತ್ಯ ಅನುಭವ, ತರಬೇತಿ, ಕಾನೂನಾತ್ಮಕ ಅನುಮತಿ ಇತ್ಯಾದಿಗಳ ಅಗತ್ಯವಿದೆ. ತೆಂಗಿನ ಉತ್ಕೃಷ್ಟ ಉತ್ಪನ್ನವಾದ ಕಲ್ಪರಸಕ್ಕೆ ಇದೀಗ ಈ ಎಲ್ಲಾ ಅನುಮತಿಗಳೂ ಸಿಕ್ಕಿವೆ. ಕರಾವಳಿಯ ತೆಂಗು ಬೆಳೆಗಾರರಿಗೆ ಇದೊಂದು ವರದಾನವಾಗಿದೆ. ಕಲ್ಪರಸ ಉತ್ಪನ್ನ ಜನಪ್ರಿಯವಾಗಿಸಲು ಉತ್ತಮ ಮಾರುಕಟ್ಟೆ ಜಾಲ ಮತ್ತು ಬ್ರ್ಯಾಂಡ್ ರೂಪಿಸುವುದು ಮುಂದಿನ ಗುರಿಯಾಗಬೇಕು" ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್ ಹೇಳಿದರು.
ಕುಂದಾಪುರ ನಗರದ ಮುಖ್ಯ ರಸ್ತೆಯಲ್ಲಿ ಉಡುಪಿ ಕಲ್ಪರಸ ಕೊಕೊನಟ್ ಮತ್ತು ಆಲ್ ಸ್ಪೈಸಸ್ ಪ್ರೊಡ್ಯುಸರ್ಸ್ ಕಂಪೆನಿ ಲಿಮಿಟೆಡ್ (ಉಕಾಸ) ನವರ ತೆಂಗು ಪಾನೀಯ ಕಲ್ಪರಸ ಹಾಗೂ ಅದರ ಉಪ ಉತ್ಪನ್ನಗಳ ಸುಸಜ್ಜಿತ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಕಲ್ಪರಸ ಪಾನೀಯವು ವಾತಾವರಣದ ವ್ಯತ್ಯಾಸದಿಂದ ಬೇಗನೆ ಕೆಡುವ ಸಂಭವವಿರುವುದರಿಂದ ಈ ವ್ಯವಹಾರಕ್ಕೆ ವಿಮೆ ಪಡೆದಿರುವುದು ಅವಶ್ಯಕ ಎಂಬ ಸಲಹೆ ನೀಡಿದ ಡಾ. ಭಟ್, ಹವಾಮಾನ ಮತ್ತು ಮಾರುಕಟ್ಟೆ ವೈಪರೀತ್ಯದಿಂದ ಇಂದು ರೈತರು ಒಂದೇ ಬೆಳೆ ನೆಚ್ಚಿಕೊಳ್ಳುವ ಬದಲು ಪಶುಸಂಗೋಪನೆ, ತೆಂಗಿನ ಉತ್ಪನ್ನಗಳ ಕಡೆ ಗಮನಹರಿಸಿದರೆ ಲಾಭ ಪಡೆಯುವುದು ಸಾಧ್ಯ" ಎಂದರು.
ನಿವೃತ್ತ ತೋಟಗಾರಿಕಾ ಇಲಾಖಾಧಿಕಾರಿ ಸಂಜೀವ ನಾಯಕ್ ಮತ್ತು ಕಲ್ಪರಸ ಸಂಗ್ರಹಿಸುವ ತರಬೇತಿ ನೀಡಿದ ಮೂರ್ತೆದಾರ ಕೃಷ್ಣ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಮಾತನಾಡಿದರು.
ಮುಖ್ಯ ಅತಿಥಿ ಉಡುಪಿ ಜಿಲ್ಲಾ ಪಂಚಾಯತ್ ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇ ಗೌಡ, ಅಬಕಾರಿ ಇಲಾಖಾಧಿಕಾರಿ ಅಶೋಕ್ ಶುಭ ಹಾರೈಸಿದರು.
ಉಡುಪಿ ಜಿಲ್ಲಾ ಕರ್ನಾಟಕ ಪ್ರದೇಶ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ನವೀನಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಉಕಾಸದ ಅಧ್ಯಕ್ಷ ಜಪ್ತಿ ಸತ್ಯನಾರಾಯಣ ಉಡುಪ ಸ್ವಾಗತಿಸಿ ಪ್ರಸ್ತಾವನೆಗೈದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಧನಂಜಯ, ಅಬಕಾರಿ ಇಲಾಖಾಧಿಕಾರಿಗಳಾದ ಕಿರಣ್, ರಂಗನಾಥ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸುಬ್ರಹ್ಮಣ್ಯ ಹೊಳ್ಳ, ಉಕಾಸದ ನಿರ್ದೇಶಕರು, ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು.
ಭಾಸ್ಕರ ಉಡುಪ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.