ಮಂಗಳೂರು,ಜ 14 (DaijiworldNews/MS): ಪಶ್ಚಿಮ ಘಟ್ಟ ಹಾದೂಹೋಗಿರುವ ಜಿಲ್ಲೆಯ ರಸ್ತೆಗಳು ಕೆಲವೆಡೆ ಕಿರಿದಾಗಿದ್ದು, ಸಂಚರಿಸುವ ಬಸ್ಸುಗಳು ಸಮಯಪಾಲನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸೂಚಿಸಿದರು.
ಅವರು ಜ.13ರ ಗುರುವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿರಿದಾದ ರಸ್ತೆಯಲ್ಲಿ ಸಂಚರಿಸುವಾಗ ಜಾಗೃತೆಯಿಂದ ಚಲಿಸಬೇಕು, ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದ ಅವರು, ಸಂಚಾರ ದಟ್ಟಣೆ ಅವಧಿ ಹಾಗೂ ಇತರೆ ಸಮಯದಲ್ಲೂ ಕೂಡ ಸಾರ್ವಜನಿಕರು ಹಾಗೂ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಖಾಸಗಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಸಂಚರಿಸಬೇಕು ಎಂದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಸಮಯಪಾಲನೆಗೆ ಒತ್ತು ನೀಡಬೇಕು, ಅವುಗಳಿಗೆ ನೀಡಲಾದ ನಿಗದಿತ ಸಮಯವನ್ನು ಬಿಟ್ಟು ಇತರೆ ಸಮಯದಲ್ಲಿ ರೂಟ್ಗಳಿಗೆ ತೆರಳಿ, ಸಮಯ ಪಾಲನೆಯ್ನನು ಉಲ್ಲಂಘಿಸಿದರೆ ಆ ಬಸ್ಸುಗಳಿಗೆ ನೀಡಲಾದ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದು ಖಾರವಾಗಿ ತಿಳಿಸಿದರು.
ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಪ್ರಯಾಣಿಕರಿದ್ದು, ಆ ಸ್ಥಳಗಳಿಂದ ಬಸ್ಗಳ ಸಂಚಾರಕ್ಕೆ ಖಾಸಗಿ ಬಸ್ ಮಾಲೀಕರು ಪರ್ಮಿಟ್ ಪಡೆದು ಕೂಡ ಸಂಚರಿಸದಿರುವು ಕಂಡುಬರದಿದ್ದರೆ, ಅವುಗಳಿಗೆ ಅವುಗಳಿಗೆ ನೀಡಲಾದ ಪರ್ಮಿಟ್ ಅನ್ನು ರದ್ದುಪಡಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವರದಿ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು, ಕೆಲವು ಪ್ರದೇಶಗಳಲ್ಲಿ ಪ್ರಯಾಣಿಕರಿದ್ದೂ, ಖಾಸಗಿ ಬಸ್ಗಳೂ ಅಲ್ಲಿಂದ ಆಪರೇಟ್ ಮಾಡದೇ ಇದ್ದಲ್ಲೀ, ಕೆಎಸ್ಆರ್ ಟಿಸಿ ಬಸ್ಗಳನ್ನು ಓಡಿಸಲು ಪರಿಶೀಲನೆ ನಡೆಸುವಂತೆ ಕೆಎಸ್ಆರ್ ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣಾ ಎಸ್.ಎನ್. ಅವರಿಗೆ ತಿಳಿಸಿದರು.
ಕೆಲವೊಂದು ರೂಟ್ಗಳಲ್ಲಿ ಕಡಿಮೆ ಬಸ್ಗಳಿದ್ದು ಹೆಚ್ಚಿನ ಪ್ರಯಾಣಿಕರಿದ್ದರೆ, ಅಲ್ಲಿ ಹೆಚ್ಚಿನ ಟ್ರಿಪ್ ಮಾಡಲು ಇರುವ ಅನುಕೂಲತೆಗಳ ಬಗ್ಗೆ ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಪರಿಶೀಲಿಸುವಂತೆ ಸೂಚಿಸಿದರು.
ಎ.ಬಿ.ಶೆಟ್ಟಿ ಸರ್ಕಲ್ನಿಂದ ಕ್ಲಾಕ್ಟವರ್ ವರೆಗೆ ರಸ್ತೆ ವಿಶಾಲವಾಗಿದೆಯೆಂದು ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಗಳಾಗಲಿ, ಇತರೆ ಬಸ್ಗಳಾಗಲೀ ಅಲ್ಲಿ ತಮ್ಮ ಬಸ್ಗಳನ್ನು ನಿಲ್ಲಿಸಿ, ಸಾರ್ವಜನಿಕರ ಸಂಚಾರಕ್ಕೆ ತೊಂದರೆಯುಂಟು ಮಾಡಿದ್ದಲ್ಲೀ, ಶಾಶ್ವತವಾಗಿ ಅವುಗಳ ಪರ್ಮಿಟ್ ರದ್ದು ಪಡಿಸಲಾಗುವುದು ಎಂದರು.
ಎನ್.ಎಂ.ಪಿ.ಟಿಯಿಂದ ವಿವಿಧ ಕಚ್ಛಾ ಸಾಮಗ್ರಿಗಳು ಹಾಗೂ ಇತರೆ ವಸ್ತುಗಳನ್ನು ಸಾಗಿಸುವ ಲಾರಿಗಳು ನಿಗಧಿ ಪಡಿಸಲಾದ ಟನ್ಗಳನ್ನಷ್ಟೇ ಸಾಗಿಸಬೇಕು, 30 ಟನ್ ಬದಲು 40 ಟನ್ಗಳನ್ನು ಟ್ರಕ್ಗಳು ಸಾಗಾಟ ಮಾಡಿದರೆ ರಸ್ತೆ ಹಾನಿಗೀಡಾಗುತ್ತದೆ, ಇದನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪೊಲೀಸರ ನೆರವಿನಿಂದ ಪತ್ತೆಹಚ್ಚಬೇಕು, ಓವರ್ಲೋಡ್ ಆಗ ಲಾರಿಗಳನ್ನು ಯಾರ್ಂಡಮ್ ತಪಾಸಣೆ ನಡೆಸಿ ವೇಬ್ರಿಜ್ಡ್ನಲ್ಲಿ ತಪಾಸಣೆ ನಡೆಸಬೇಕು, ಎನ್ಎಂಪಿಟಿಯಿಂದ ಲೋಡ್ ಆಗುವ ಟ್ರಕ್ಗಳು ಪ್ರತಿದಿನ ಹೊತ್ತುಕೊಂಡು ಹೋಗುವ ತೂಕದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಎನ್ಎಂಪಿಟಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಅಪರಾಧ ಮತ್ತು ಸಂಚಾರದ ಡಿಸಿಪಿ ದಿನೇಶ್ ಕುಮಾರ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ. ವರ್ಣೇಕರ್ ವೇದಿಕೆಯಲ್ಲಿದ್ದರು.
ಖಾಸಗಿ ಬಸ್ಗಳ ಮಾಲೀಕರ ಸಂಘದ ಪದಾಧಿಕಾರಿಗಳು, ವಕೀಲರು, ದಕ್ಷಿಣ ಕನ್ನಡ ಟ್ರಕ್ ಮಾಲೀಕರ ಸಂಘದ ಅಧ್ಯಕ್ಷ ಸುನೀಲ್ ಡಿಸೋಜಾ, ಕಾರ್ಯದರ್ಶಿ ಸುಶಾಂತ್ ಶೆಟ್ಟಿ, ರಿಕ್ಷಾ ಮಾಲೀಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮಂಗಳೂರು ಕೆನರಾ ಬಸ್ ಮಾಲೀಕರ ಸಂಘ, ಮಂಗಳೂರು-ಉಡುಪಿ ಕರಾವಳಿ ಬಸ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷರು, ಜಿಲ್ಲಾ ಅಧ್ಯಕ್ಷರು, ಇತರೆ ಬಸ್ ಪರವಾನಿಗೆದಾರರು ಹಾಗೂ ಸಾರ್ವಜನಿಕರು ಸಭೆಯಲ್ಲಿದ್ದರು.