ಮಂಗಳೂರು, ಜ. 13 (DaijiworldNews/SM): ನಗರದಲ್ಲಿ ಯುವಕನೊಬ್ಬ ಮೊಬೈಲ್ ಕದ್ದು ಪರಾರಿಯಾಗಲು ಯತ್ನಿಸುತ್ತಿರುವುದನ್ನು ಕಂಡ ಪೊಲೀಸ್ ಆತನನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಘಟನೆ ನಡೆದಿದೆ. ಆದರೆ, ಇಲ್ಲಿ ಪೊಲೀಸರ ಶ್ರಮದ ಜೊತೆಗೆ ಪೊಲೀಸ್ ಕಾರ್ಯ ಸಾಮಾಜಕ್ಕೆ ತೆರೆದುಕೊಳ್ಳಲು ಕಾಣದ ಕೈಯೊಂದು ಬೆವರಿಳಿಸಿದೆ. ನಗರದ ಪತ್ರಕರ್ತರೊಬ್ಬರು ಪೊಲೀಸರನ್ನು ಹಿಂಬಲಿಸಿ ಓಡಿಕೊಂಡು ವೀಡಿಯೋ ಚಿತ್ರೀಕರಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ನೆಹರೂ ಮೈದಾನದಲ್ಲಿ ಮಲಗಿದ್ದ ವ್ಯಕ್ತಿಯೋರ್ವನ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದನ್ನು ಕಂಡ ಸ್ಥಳೀಯರು ಹಾಗೂ ಮೊಬೈಲ್ ಕಳೆದುಕೊಂಡ ವ್ಯಕ್ತಿ ಬೆನ್ನಟ್ಟಿದ್ದಾರೆ. ಮೊಬೈಲ್ ಕದ್ದು ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಪೊಲೀಸ್ ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದು, ಮತ್ತೋರ್ವನನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆಯೆ ವೀಡಿಯೋ ಗುರುವಾರ ಮಧ್ಯಾಹ್ನದಿಂದ ವೈರಲ್ ಆಗುವ ಮೂಲಕ ತೀವ್ರ ಸಂಚಲನ ಮೂಡಿಸಿತ್ತು. ಆದರೆ, ಇದರ ಸೂತ್ರದಾರ ಯಾರು ಎನ್ನುವುದು ತುಂಬಾ ಜನರಿಗೆ ತಿಳಿದಿರದ ವಿಚಾರವಾಗಿದೆ. ಸಿನಿಮೀಯ ಶೈಲಿಯಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು ಒಂದು ಕಡೆಯಾದರೆ, ಅಷ್ಟೇ ರೋಚಕವಾಗಿ ಟಿವಿ-9 ವಾಹಿನಿಯ ಪತ್ರಕರ್ತ ಪೃಥ್ವಿರಾಜ್ ಬೊಮ್ಮನಕೆರೆ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ.
ಕಳ್ಳನನ್ನು ಬೆನ್ನಟ್ಟಿ ಪೊಲೀಸ್ ಸಿಬ್ಬಂದಿ ವರುಣ್ ಓಡಾಲು ಆರಂಭಿಸಿದ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಟಿವಿ-9 ವಾಹಿನಿಯ ಪತ್ರಕರ್ತ ಪೃಥ್ವಿರಾಜ್ ಘಟನೆಯ ಬಗ್ಗೆ ಕುತೂಹಲಗೊಂಡು ತಮ್ಮಲ್ಲಿದ್ದ ಮೊಬೈಲ್ ಮೂಲಕ ವೀಡಿಯೋ ಚಿತ್ರೀಕರಣ ಆರಂಭಿಸಿದ್ದಾರೆ. ಸಂಚಾರ ದಟ್ಟನೆಯಿಂದಾಗಿ ತಾನು ತೆರಳುತ್ತಿದ್ದ ಕಾರು ಮುಂದಕ್ಕೆ ಕೊಂಡೊಯ್ಯಲು ಅಸಾಧ್ಯವಾದ ಸಂದರ್ಭದಲ್ಲಿ ಕಾರಿನಿಂದ ಇಳಿದು ಇಬ್ಬರನ್ನು ಹಿಂಬಾಲಿಸಿದ್ದಾರೆ.
ಕಳ್ಳ-ಪೊಲೀಸ್ ಆಟದಂತೆ ಘಟನೆ ಕಂಡುಬಂದರೂ, ನಡೆದಿರುವ ನೈಜ ಸನ್ನಿವೇಷವನ್ನು ಕಡೆಯ ತನಕ ಸೆರೆಹಿಡಿದು ಅವರಷ್ಟೇ ವೇಗದಲ್ಲಿ ಹೆಜ್ಜೆಗಳನ್ನಿಟ್ಟು ಆರೋಪಿಯನ್ನು ಚೇಸ್ ಮಾಡಿದ ದೃಶ್ಯವನ್ನು ಸೆರೆಹಿಡಿದಿರುವುದು ಪೃಥ್ವಿರಾಜ್. ಇದರಿಂದಾಗಿ ಪೊಲೀಸ್ ಸಿಬ್ಬಂದಿ ವರುಣ್ ಪಟ್ಟ ಶ್ರಮ ಸಮಾಜಕ್ಕೆ ತೆರೆದುಕೊಳ್ಳಲು ಕಾರಣವಾಗಿದೆ. ಒಂದೊಮ್ಮೆ ಸಂಪೂರ್ಣ ದೃಶ್ಯ ಸೆರೆಯಾಗದೇ ಹೋಗಿದ್ದಲ್ಲಿ ಪೊಲೀಸ್ ಸಿಬ್ಬಂದಿಯ ಶ್ರಮ ವ್ಯರ್ಥವಾಗುತ್ತಿತ್ತೇನೋ?
ಆದರೆ, ಸಮಾಜ, ಸರಕಾರವನ್ನು ಸದಾ ಎಚ್ಚರಿಸುವ ಪತ್ರಕರ್ತರು ನಿತ್ಯ ಅಲರ್ಟ್ ಆಗಿರುತ್ತಾರೆ ಎನ್ನುವುದು ಈ ಘಟನೆಯಿಂದ ಸಾಬೀತಾಗಿದೆ. ಪೊಲೀಸ್ ಸಿಬ್ಬಂದಿ ವರುಣ್ ಹಾಗೂ ಪತ್ರಕರ್ತ ಪೃಥ್ವಿರಾಜ್ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರ್ ಅವೌ ಕೂಡ ಸದ್ಯ ಇಬ್ಬರ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.