ಕುಂದಾಪುರ, ಜ 13 (DaijiworldNews/MS): ಕಳೆದ ಮೂವತ್ತು ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಕೊಡೇರಿ ಕಿರು ಬಂದರು ನಿರ್ಮಾಣಗೊಂಡಿದೆ. ಸರ್ಕಾರ ಬರೋಬ್ಬರಿ 64 ಕೋಟಿ 80 ಲಕ್ಷ ರೂ. ಹಣ ವ್ಯಯಿಸಿ ಮಾಡಿರುವ ಕಿರು ಬಂದರು ಮೀನುಗಾರರಿಗೆ ಸಹಾಯವಾಗದೆ ಇರುವುದು ದುರಂತ. ಮೂಲಭೂತ ಸೌಕರ್ಯಗಳಿಲ್ಲದೇ, ಕೆಲ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ 10 ಸಾವಿರ ಮೀನುಗಾರರು, ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ನಮ್ಮ ಮನವಿಗಳಿಗೆ ಯಾರೂ ಸ್ಪಂದಿಸುತ್ತಿಲ್ಲ. ಹೀಗಾಗಿ ನಿದ್ದೆಗಣ್ಣಿನಲ್ಲಿರುವ ಸರ್ಕಾರ ಹಾಗೂ ಇಲಾಖೆಯನ್ನು ಎಚ್ಚರಿಸಲು ಜನವರಿ 17 ರಂದು ಬೈಂದೂರಿನ ತಹಸೀಲ್ದಾರ್ ಕಚೇರಿ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ತಯಾರಿ ನಡೆಸಿದ್ದೇವೆ ಎಂದು ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಹೇಳಿದರು.
ಅವರು ಗುರುವಾರ ಇಲ್ಲಿನ ಉಪ್ಪುಂದ ಸಮೀಪದ ಕೊಡೇರಿ ಕಿರು ಬಂದರಿನಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಾಕಷ್ಟು ಸಮಸ್ಯೆಗಳ ನಡುವೆಯೂ ಕಳೆದ ಎರಡು ವರ್ಷಗಳಿಂದ ಕೊಡೇರಿ ಕಿರು ಬಂದರುವಿನಲ್ಲಿ ಮೀನುಗಾರಿಕಾ ವಹಿವಾಟು ನಡೆಸುತ್ತಾ ಬಂದಿದ್ದೇವೆ. ಈಗಾಗಲೇ 400 ಮೀ ಬ್ರೇಕ್ ವಾಟರ್ ಕಾಮಗಾರಿ ಕೊನೆಯ ಹಂತಕ್ಕೆ ಬಂದು ತಲುಪಿದೆ. ಇನ್ನು ನಾಲ್ಕೈದು ತಿಂಗಳುಗಳಲ್ಲಿ ಸಮುದ್ರದಲ್ಲಿ ಅಲೆಗಳು ಹೆಚ್ಚಾಗುತ್ತದೆ. ಅಷ್ಟರೊಳಗೆ ಹೂಳೆತ್ತುವ ಕಾರ್ಯ ನಡೆಯಬೇಕು. ಸಮುದ್ರದ ಅಲೆಗಳು ಹೆಚ್ಚಿರುವುದರಿಂದ ದೋಣಿ ಇಲ್ಲಿಗೆ ಬರಲು ಸಾಧ್ಯವಾಗದೆ ಅನೇಕ ಸಾವು-ನೋವುಗಳು ಸಂಭವಿಸಿದೆ. ಕಳೆದ ವರ್ಷ ನಾಲ್ವರು ಮೀನುಗಾರರು ಹಾಗೂ ಈ ಬಾರಿ ಇಬ್ಬರು ಈ ಭಾಗದ ಮೀನುಗಾರರು ಸಾವನ್ನಪ್ಪಿದ್ದಾರೆ. ಇಂತಹ ಅವಘಡಗಳು ಮುಂದೆ ನಡೆಯಬಾರದು ಎಂಬ ಕಾಳಜಿ ಸರ್ಕಾರಕ್ಕಿದ್ದರೆ ಶೀಘ್ರವೇ ಹೂಳೆತ್ತುವುದು ಮತ್ತು ಬ್ರೇಕ್ ವಾಟರ್ ಕಾಮಗಾರಿ ಮುಂದುವರೆಸುವ ಕೆಲಸಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
2010ರಲ್ಲಿ 30 ಕೋಟಿ ಹಣ ಬಿಡುಗಡೆಯಾಗಿತ್ತು. ಈ ಕಾಮಗಾರಿ ಮುಗಿದ ಬಳಿಕ 2015ರಲ್ಲಿ 33 ಕೋಟಿ ಹಣ ಬಿಡುಗಡೆಗೊಂಡಿತ್ತು. ಇಷ್ಟು ದೊಡ್ಡ ಮೊತ್ತದ ಹಣ ವಿನಿಯೋಗಿಸಿಯೂ ಹರಾಜು ಪ್ರಾಂಗಣವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೀನು ಖಾಲಿ ಮಾಡುವ ಜಟ್ಟಿ ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಜಟ್ಟಿಯ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ 100 ಮೀ ವರೆಗಿನ ಜಾಗವನ್ನು ಸಮತಟ್ಟು ಮಾಡಿಕೊಟ್ಟರೆ ಮೀನುಗಾರರಿಗೆ ಒಂದಷ್ಟು ಅನುಕೂಲಗಳಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು, ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೆ ಇದುವರೆಗೂ ಏನೂ ಪ್ರಯೋಜನವಾಗಿಲ್ಲ. ಹಿಂದೊಮ್ಮೆ ಪ್ರತಿಭಟನೆಗೆ ಕರೆ ಕೊಟ್ಟ ಬಳಿಕ ಈ ಪ್ರಾಂಗಣಕ್ಕೆ ವಿದ್ಯುತ್ ಸಂಪರ್ಕ ನೀಡಿ, ಅಗತ್ಯವಾಗಿ ಬೇಕಿರುವ ಶೌಚಾಲಯ ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಲಾಯಿತು. ಆದರೆ ಕೆಲ ಸ್ಥಾಪಿತ ಹಿತಾಸಕ್ತಿಗಳು ರಾತ್ರಿ ವೇಳೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಶೌಚಾಲಯ ಕಟ್ಟಡದ ಗೋಡೆಯನ್ನು ನೆಲಸಮಗೊಳಿಸಿದ್ದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
17ರಂದು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ:
ಅವೈಜ್ಞಾನಿಕ ಜಟ್ಟಿ ನಿರ್ಮಾಣ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳ ಬೇಡಿಕೆಗಳ ಈಡೇರಿಕೆಗಾಗಿ, ಕೊಡೇರಿ ಕಿರು ಬಂದರು ಅಭಿವೃದ್ದಿಗೆ ಆಗ್ರಹಿಸಿ ಒಂದು ದಿನ ಮೀನುಗಾರಿಕೆಗೆ ರಜೆ ಘೋಷಿಸಿ ಜನವರಿ 17 ರಂದು ಬೈಂದೂರು ತಹಸೀಲ್ದಾರ್ ಕಚೇರಿ ಎದುರು ಮೀನುಗಾರರೆಲ್ಲರೂ ಸೇರಿ ಬೃಹತ್ ಪ್ರತಿಭಟನೆಯನ್ನು ಕೈಗೊಂಡಿದ್ದೇವೆ. ಕೋವಿಡ್ ನಿಯಮಗಳನ್ನನುಸರಿಸಿ ಕೇವಲ ಒಂದು ಸಾವಿರದಷ್ಟು ಮೀನುಗಾರರು ತೆರಳಿ ಮನವಿ ನೀಡುತ್ತೇವೆ. ಇದಕ್ಕೂ ಸ್ಪಂದಿಸಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಇನ್ನೊಂದು ಬೃಹತ್ ಹೋರಾಟಕ್ಕೆ ಸಜ್ಜಾಗುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವೆಂಕಟರಮಣ ಖಾರ್ವಿ ಅವರು, ಪತ್ರಿಕಾಗೋಷ್ಠಿಯ ವಿಚಾರ ತಿಳಿದು ಗುರುವಾರ ಶಾಸಕರು ಕಿರು ಬಂದರಿಗೆ ಭೇಟಿ ನೀಡಿ ಬಳಿಕ ಮೀನುಗಾರ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಶೀಘ್ರವೇ ಕಾಮಗಾರಿಗೆ ಚಾಲನೆ ನೀಡುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದಾರೆ. ಆದರೆ ಇಲ್ಲಿಯ ತನಕವೂ ಎಲ್ಲರೂ ನೀಡಿರುವ ಆಶ್ವಾಸನೆಗಳನ್ನು ನಂಬಿಕೊಂಡೆ ಬಂದಿದ್ದೇವೆ. ನಮ್ಮ ಸಂಕಷ್ಟಗಳಿಗೆ ಯಾರೂ ಕಿವಿಯಾಗಿಲ್ಲ. ಪ್ರತಿಭಟನೆಗೆ ಕರೆಕೊಟ್ಟ ಒಂದೆರಡು ದಿನ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಮತ್ತೆ ಅದೇ ಚಾಳಿ ಮುಂದುವರೆಯುತ್ತದೆ. ಹೀಗಾಗಿ ಪ್ರತಿಭಟನೆ ಮಾಡಿಯೇ ಬಿಸಿ ಮುಟ್ಟಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಣಿಬಲೆ ಮೀನುಗಾರರ ಒಕ್ಕೂಟದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಕಾರ್ಯದರ್ಶಿ ಸುರೇಶ್ ಖಾರ್ವಿ, ಕೋಶಾಧಿಕಾರಿ ನಾಗೇಶ್ ಖಾರ್ವಿ, ನಿರ್ದೇಶಕರಾದ ನವೀನ್ ಖಾರ್ವಿ, ಸೋಮಶೇಖರ್, ಶಂಕರ್, ರಾಘವೇಂದ್ರ, ಶರತ್, ಶ್ರೀನಿವಾಸ್, ಕೃಷ್ಣ ಖಾರ್ವಿ ಇದ್ದರು.