ಮಂಗಳೂರು ಡಿ,06 (MSP): ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಅಭ್ಯರ್ಥಿ ಆಯ್ಕೆ ಸಂಬಂಧ ಶೋಧನ ಸಮಿತಿ ಡಿ.೦೫ ರ ಬುಧವಾರ ಹೆಸರನ್ನು ಅಂತಿಮಗೊಳಿಸಿ ಮುಚ್ಚಿದ ಲಕೋಟಿಯಲ್ಲಿ ಸರಕಾರಕ್ಕೆ ಸಲ್ಲಿಸಿದೆ. ಹೀಗಾಗಿ ಯಾರು ಮಂಗಳೂರು ಕುಲಪತಿ ಹುದ್ದೆ ಅಲಂಕರಿಸುತ್ತಾರೆ ಎನ್ನುವ ಕುತೂಹಲ ಹುಟ್ಟು ಹಾಕಿದೆ.
ಕುಲಪತಿ ಹುದ್ದೆಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಪ್ರೋ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಹಿರಿಯ ಪ್ರಾಧ್ಯಾಪಕರುಗಳಾದ ಡಾ.ಆರ್ .ಕೆ ಸೋಮಶೇಖರ್ , ಡಾ ಆಶೋಕ್, ಡಾ ನಾರಾಯಣ, ಹಾಗೂ ಡಾ ರಾಮಚಂದ್ರ ಗೌಡ ಅವರ ಹೆಸರು ಕೇಳಿ ಬಂದಿದೆ. ಇವರಲ್ಲಿಯೇ ಮೂವರು ಅಂತಿಮ ಪಟ್ಟಿಯಲ್ಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಶೋಧನ ಸಮಿತಿ ಅಧ್ಯಕ್ಷ , ತುಮಕೂರು ವಿವಿ ಕುಲಪತಿ ಡಾ.ಸಿದ್ದೇಗೌಡ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದು , ಮೂವರ ಹೆಸರನ್ನು ಅಂತಿಮಗೊಳಿಸಿ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಅವರಿಗೆ ಸಲ್ಲಿಸಲಾಗಿದೆ. ಸರಕಾರ ಶೋಧನ ಸಮಿತಿಯ ಶಿಫಾರಸ್ಸಿನಂತೆ ಒಬ್ಬರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಸರಕಾರದ ಮನವಿಯನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ. ರಾಜ್ಯಪಾಲರ ಸಹಿಯ ಬಳಿಕವಷ್ಟೇ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಮಂಗಳೂರು ಕುಲಪತಿ ಹುದ್ದೆಗೆ ಒಟ್ಟು 71 ಅರ್ಜಿಗಳು ಬಂದಿದ್ದು, ಮೊದಲ ಹಂತದಲ್ಲಿ 25 ಅರ್ಜಿಗಳನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಈ ಪಟ್ಟಿಯನ್ನು ೧೩ ಕ್ಕೆ ಇಳಿಸಲಾಗಿದ್ದು, ಬುಧವಾರದ ಸಭೆಯಲ್ಲಿ 3 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಅಭ್ಯರ್ಥಿಗಳು ಮಾಡಿರುವ ಸಾಧನೆಯ ಆಧಾರದಲ್ಲಿ ಪಟ್ಟಿಯನ್ನು ತಯಾರು ಮಾಡಿದ್ದೇವೆ ಎಂದು ಶೋಧನ ಸಮಿತಿಯ ಅಧ್ಯಕ್ಷ ಪ್ರೋ. ವೈ ಎಸ್ ಸಿದ್ದೇಗೌಡ ಮಾಹಿತಿ ನೀಡಿದ್ದಾರೆ.