ಮಂಗಳೂರು, ಜ 13 (DaijiworldNews/PY): ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕು ತಡೆಗೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತದ ವತಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಕೇರಳದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.5.6ರಷ್ಟಿದ್ದು, ಸೋಂಕನ್ನು ನಿಯಂತ್ರಿಸು ಸಲುವಾಗಿ ವಿದ್ಯಾರ್ಥಿಗಳಿಗೆ ಕೇರಳದಿಂದ ಹಿಂದಿರುಗುವ ವೇಳೆಯಲ್ಲಿ 72 ಗಂಟೆಗಳ ಆರ್ಟಿಪಿಸಿಆರ್ ಪರೀಕ್ಷೆಗೊಳಪಡಿಸಿ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದುವುದಲ್ಲದೇ, 7 ದಿನಗಳ ಐಸೋಲೇಶನ್ ಹಾಗೂ 8ನೇ ದಿನದ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿದೆ. ಈ ಎಲ್ಲಾ ಸೂಚನೆಗಳು ಜಿಲ್ಲೆಯ ಎಲ್ಲಾ ವೈದ್ಯಕೀಯ ಕಾಲೇಜುಗಳು, ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳು ಹಾಗೂ ಎಲ್ಲಾ ಪ್ಯಾರಾ ಮೆಡಿಕಲ್ ಕಾಲೇಜುಗಳಿಗೆ ಅನ್ವಯವಾಗಲಿದೆ.
ಜಿಲ್ಲೆಯ ತಾಂತ್ರಿಕಾ ಸಲಹಾ ಸಮಿತಿಯು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಕ್ರಮಗಳನ್ನು ಶಿಫಾರಸ್ಸು ಮಾಡಿದ್ದು, ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ನಿರ್ದೇಶಿಸಿದೆ ಎಂದು ಆದೇಶದಲ್ಲಿ ಹೇಳಿದೆ.
ಕೊರೊನಾ ನಿಯಂತ್ರಿಸುವ ಸಲುವಾಗಿ ಎಲ್ಲಾ ಶಿಕ್ಷಣ ಸಂಸ್ಥಗಳಲ್ಲಿ, ಅಪಾರ್ಟ್ಮೆಂಟ್ಗಳಲ್ಲಿ, ಮಾಲ್ಗಳಲ್ಲಿ ಸ್ಕ್ರೀನಿಂಗ್, ಟೆಸ್ಟಿಂಗ್ಗಳನ್ನು ಮತ್ತಷ್ಟು ಹೆಚ್ಚಿಸುವುದು, ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಐಸೋಲೇಶನ್ಗೆ ಒಳಪಡಿಸುವುದು ಎಂದು ತಿಳಿಸಿದೆ.
ಅಂತರಾಷ್ಟ್ರೀಯ ಪ್ರಯಾಣಕರ ಪರೀಕ್ಷೆಯನ್ನು ಮುಂದುವರಿಸಲಾಗಿದೆ. ಮಾರ್ಗಸೂಚಿಯ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ರ್ಯಾಂಡಮ್ ಪರೀಕ್ಷೆಗಳನ್ನು ನಿಲ್ಲಿಸಲಾಗುವುದು ಎಂದು ಹೇಳಿದೆ.
ಹೋಂ ಐಸೋಲೇಷನ್ ಪ್ರಕರಣಗಳತ್ತ ಕಟ್ಟುನಿಟ್ಟಾಗಿ ಗಮನವಹಿಸಲಾಗುವುದು, ಕಂಟೈನ್ಮೆಂಟ್ ಝೋನ್ಗಳನ್ನು ಕೂಡಾ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ ಆಸ್ಪತ್ರೆಯ ಸಿಬ್ಬಂದಿಗಳು ಐಪಿಸಿ ಪ್ರೋಟೋಕಾಲ್ಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
15-18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವುಕೆಯನ್ನು ಕೂಡಲೇ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಕೊರೊನಾ ಮುನ್ನೆಚ್ಚಾರಿಕಾ ಕ್ರಮಗಳಾದ ಮಾಸ್ಕ್, ಸ್ಯಾನಿಟೈಸ್ ಹಾಗೂ ಸಾಮಾಜಿಕ ಅಂತರವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.