ಮೂಡುಬಿದಿರೆ, ಜ 13 (DaijiworldNews/AN): ತುಂಡರಿಸಿದ ರೀತಿಯಲ್ಲಿ ದನದ ತಲೆ ಪತ್ತೆಯಾದ ಘಟನೆ ಮೂಡುಬಿದಿರೆ ತಾಲೂಕಿನ ಮಹಾವೀರ ಕಾಲೇಜು ಸಮೀಪದ ಕೊಡಂಗಲ್ಲು ಕೀರ್ತಿನಗರ ಕ್ರಾಸ್ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
ಹಸುವಿನ ಮುಂಡದಿಂದ ಬೇರ್ಪಟ್ಟಿದ್ದ ತಲೆಬುರುಡೆಯನ್ನು ಗೋಣಿ ಚೀಲದಲ್ಲಿ ಸುತ್ತಿ ರಸ್ತೆಯ ಪಕ್ಕದಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪೊಲೀಸರು ತಲೆಬುರುಡೆಯನ್ನು ಹೊರತೆಗೆಯುವ ವ್ಯವಸ್ಥೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೂಡುಬಿದಿರೆಯ ಹಿಂದೂ ಜಾಗರಣ ವೇದಿಕೆ, "ಕಿಡಿಗೇಡಿಗಳು ಹಿಂದೂಗಳ ಭಾವನೆಗಳೊಂದಿಗೆ ಆಟವಾಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಅಪರಾಧಿಗಳನ್ನು ಬಂಧಿಸಲು ಪೊಲೀಸರಿಗೆ 48 ಗಂಟೆಗಳ ಸಮಯವನ್ನು ನೀಡಲಾಗಿದ್ದು, ಅದು ವಿಫಲವಾದರೆ ಇಲ್ಲಿನ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ.