ಎನ್.ಆರ್ ಪುರ, ಡಿ,06 (MSP): ಸುಪ್ರೀಂ ಕೋರ್ಟ್ನ ತೀರ್ಪು ನೀಡುವವರೆಗೆ ಕಾಯುತ್ತಾ ಕುಳಿತಿರಲು ಸಾಧ್ಯವಿಲ್ಲ . ಅದಷ್ಟೂ ಶೀಘ್ರದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಇಲ್ಲಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕು ಎನ್ನುವುದು ಎಲ್ಲಾ ಹಿಂದೂಗಳ ಆಗ್ರಹವಾಗಿದೆ. ನಾವು ಕೂಡಾ ಅಲ್ಲಿಯೇ ರಾಮ ಮಂದಿರವನ್ನು ನಿರ್ಮಾಣ ಮಾಡಬೇಕು ಎಂದು ಪ್ರಧಾನಮಂತ್ರಿಯನ್ನು ಒತ್ತಾಯಿಸುತ್ತೇವೆ’ ಎಂದರು. ಸರ್ವೋಚ್ಚ ನ್ಯಾಯಾಲಯ ’ರಾಮ ಮಂದಿರ ನಿರ್ಮಾಣ ನಮ್ಮ ಆದ್ಯತೆಯಲ್ಲ ’ ಎಂದು ಈಗಾಗಲೇ ತಿಳಿಸಿದೆ. ಆದರೆ ಶ್ರೀರಾಮಮಂದಿರ ನಿರ್ಮಾಣ ಅಸಂಖ್ಯಾತ ಹಿಂದುಗಳ ಕನಸಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗೊತ್ತುವಳಿ ಮಂಡಿಸಿ ಮಂಡಿರಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದರು.
ಒಂದು ವೇಳೆ ಅದು ಕೂಡಾ ಆಗದಿದ್ದರೆ ಕೇಂದ್ರ ಸರ್ಕಾರ ಎರಡೂ ಧರ್ಮದ ಮುಖಂಡರನ್ನು ಕರೆಯಿಸಿ ಸಂಧಾನ ಸಭೆ ನಡೆಸಬೇಕು’ ಎಂದು ಶ್ರೀಗಳು ಸಲಹೆ ನೀಡಿದರು.