ಉಡುಪಿ, ಜ 13 (DaijiworldNews/MS): ಕೋವಿಡ್ ಸಾಂಕ್ರಮಿಕದ ಎರಡು ವರ್ಷ ನಮ್ಮೆಲ್ಲರ ಜೀವನಕ್ಕೆ ಸಾಕಷ್ಟು ಪಾಠ ಕಲಿಸಿದೆ. ಕೊರೋನಾ ಹೇಳಿಕೊಟ್ಟ ಸ್ವಾವಲಂಬಿ ಪಾಠ ಜೀವನದಲ್ಲಿ ನಿರಂತರ ಪಾಲಿಸೋಣ. ನಮ್ಮ ಊರು ನಮ್ಮ ಜನರ ಕಾಳಜಿ ವಹಿಸೋಣ ಎಂದು ಉಡುಪಿ ಪರ್ಯಾಯ ಮಠಾಧೀಶ ಈಶಪ್ರೀಯ ತೀರ್ಥಸ್ವಾಮೀಜಿ ಹೇಳಿದ್ದಾರೆ.
ಎರಡು ವರ್ಷ ಪರ್ಯಾಯಾವಧಿಯನ್ನು ಯಶಸ್ವಿಯಾಗಿ ಪೂರೈಸಿ, ಶ್ರೀ ಕೃಷ್ಣಾಪುರದ ಸ್ವಾಮಿ ಪೂಜೆಗೆ ಪೂಜಾಧಿಕಾರ ಬಿಟ್ಟುಕೊಡಲು ಒಂದು ವಾರ ಬಾಕಿಯಿದ್ದು, ಬುಧವಾರದಂದು ಕೃಷ್ಣ ಮಠದ ಕನಕ ಮಂಟಪದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿ ಮಾತನಾಡಿದರು.
ನಮ್ಮ ಊರಿನ ಸಂಸ್ಕೃತಿ ಉಳಿಲು ನಾವೇ ಉದ್ಯೋಗ ಸೃಷ್ಟಿ ಮಾಡಬೇಕು. ಯಾವುದೋ ಊರು ಯಾವುದೊ ನಾಡಿಗೆ ಹೋಗುವ ಬದಲು ಇಲ್ಲೇ ಇದ್ದು ಉದ್ಯೋಗ ಮಾಡಿಕೊಂಡು ಇರಬೇಕು. ಕುಟುಂಬ ಬಳಗದ ಜೊತೆ ಯುವ ಜನಾಂಗ ಇರಬೇಕಾದ ಅನಿವಾರ್ಯತೆ ಇದೆ ಎಂದರು. ಎಲ್ಲಾ ಸಂಸ್ಕೃತಿ ಯನ್ನು ಗೌರವಿಸೋಣ. ಆದರೆ ವಿಶ್ವಕ್ಕೆ ಮಾದರಿಯಾಗಿರುವ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು.
ಕೃಷ್ಣ ಮಠದ ಆವರಣ ಬದಲಾವಣೆ ಮಾಡಿದ್ದೇವೆ. ಶುಚಿತ್ವ ಪ್ಲ್ಯಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ಅರಿವು ಮೂಡಿಸಿದ್ದೇವೆ. ಆ ನಿಟ್ಟಿನಲ್ಲಿ ಎರಡು ವರ್ಷ ಪ್ರಯತ್ನ ಮಾಡಿದ್ದೇವೆ. ಜನ ಸಾಕಷ್ಟು ಬದಲಾವಣೆ ನೋಡಿದ್ದೇವೆ. ತಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡಿದ್ದಾರೆ. ಮನುಷ್ಯ ಜೀವನದಲ್ಲಿ ಯಾತ್ರೆ ಮಾಡುವ ಸಂಸ್ಕೃತಿ ಬೆಳೆಸಬೇಕು. ಹೊರಗಿನದ್ದು ನೋಡಿ ಉತ್ತಮವಾದದನ್ನು ತೆಗೆದುಕೊಂಡು ನಮ್ಮತನ ಉಳಿಸುವ ಅಗತ್ಯ ಇದೆ.
ಲಾಕ್ ಡೌನ್ ಸಮಯವನ್ನು ಕೆಲಸಕಾರರಿಂದ ಮಠದ ಗೋಡೆಗೆ ಬಣ್ಣ ಹಚ್ಚಿಸುವ ಮೂಲಕ ಸದ್ವಿನಿಯೋಗ ಮಾಡಿಕೊಳ್ಳಲಾಗಿದೆ.
ಅದಮಾರು ಮಠದ ಎರಡು ವರ್ಷದ ಪರ್ಯಾಯ ಸಂದರ್ಭ ಮಾಧ್ಯಮ ಚೆನ್ನಾಗಿ ಕೆಲಸ ಮಾಡಿದೆ. ಮಠದ ಅಭಿಪ್ರಾಯ ಜನಕ್ಕೆ ಮುಟ್ಟಿಸಿದ್ದಕ್ಕೆ ಧನ್ಯವಾದ ಎಂದು ಸ್ವಾಮೀಜಿ ಹೇಳಿದರು.
ಎರಡು ವರುಷಗಳ ಹಿಂದೆ ಪರ್ಯಾಯ ಪೀಠ ಏರುವ ಸಂದರ್ಭದಲ್ಲಿ ಯಾವುದೇ ಸಂಕಲ್ಪ ಮಾಡಿರಲಿಲ್ಲ. ಮುಂದೆಯೂ ಯಾವುದೇ ಸಂಕಲ್ಪ ಇಲ್ಲ. ಸಾಂದರ್ಭಿಕವಾಗಿ ಹೇಗೆ ಪ್ರತಿಕ್ರಿಯೆ ನೀಡಬಹುದೋ ಅದನ್ನು ಮಾಡ್ತೇವೆ. ಕಾಲ ಕಾಲಕ್ಕೆ ಆಗಬೇಕಾದ ಕೆಲಸ ಮಾಡಿದ್ದೇವೆ ಎಲ್ಲವೂ ಕೃಷ್ಣನ ಪಾದಕ್ಕೆ ಸಲ್ಲಿಕೆಯಾಗಿದೆ ಎಂದು ಈಶಪ್ರೀಯ ತೀರ್ಥ ಸ್ವಾಮೀಜಿ ಹೇಳಿದರು.