ಮಂಗಳೂರು, ಜ 12 (DaijiworldNews/HR): ದಕ್ಷಿಣ ಕನ್ನಡ ಕ್ಯಾಟರಿಂಗ್ ಮಾಲಕರ ಅಸೋಸಿಯೇಷನ್ ಮಂಗಳೂರು ಇದರ ಸಭೆಯು ನಗರದ ಪ್ರಧಾನ ಕಚೇರಿಯಲ್ಲಿ ಜರುಗಿತು.
ಈ ವೇಳೆ ಮಾತನಾಡಿದ ಸಂಘದ ಉಪಾಧ್ಯಕ್ಷ ರಾಜಗೋಪಾಲ್ ರೈ, "ಹಿಂದೆ ಜನರ ಬಾಯಲ್ಲಿ ಒಂದು ಮಾತು ಇತ್ತು. ಕೇಟರಿಂಗ್ ನವರು ಒಗ್ಗಟ್ಟಾಗಲು ಸಾಧ್ಯ ಉಂಟಾ ಅಂತ. ಯಾಕೆಂದರೆ ಹಿಂದೆ ಕೇಟರಿಂಗ್ ಮಾಲಕರು ತಮ್ಮ ತಮ್ಮವರ ಕಾಲಲ್ಲಿ ಹಿಡಿದು ಎಳೆಯುತ್ತ ಏಡಿಗಳಂತಿದ್ದರು. ಆದರೆ ಈಗ ಆ ಮಾತನ್ನು ಸುಳ್ಳಾಗಿಸಿ ನಮ್ಮ ಸಂಘಟನೆ ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿದೆ" ಎಂದರು.
ಇನ್ನು ಪುರಭವನದಲ್ಲಿ ವಿಜೃಂಭಣೆಯಿಂದ ಉದ್ಘಾಟನೆಗೊಂಡ ಸಂಘಟನೆಯಲ್ಲಿ ಎಲ್ಲಾ ಜಾತಿ, ಧರ್ಮದವರು ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಮೂರನೇ ವರ್ಷದಲ್ಲಿ ಸಂತೋಷ್ ಡಿಸೋಜ ಅವರು ಅಧ್ಯಕ್ಷರಾಗಿ ಕರ್ತವ್ಯ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಸದ್ಯ ಕೊರೋನಾ ಹಾವಳಿಯಿಂದ ಹೋಟೆಲ್ ಮತ್ತು ಕೇಟರಿಂಗ್ ಉದ್ಯಮಕ್ಕೆ ದೊಡ್ಡ ಏಟು ಬಿದ್ದಿದೆ. ಆದರೂ ಎಲ್ಲವನ್ನು ಧೈರ್ಯವಾಗಿ ಎದುರಿಸುತ್ತ ಹೊಸದಾಗಿ 60 ಕೇಟರಿಂಗ್ ಮಾಲಕರನ್ನು ಸಂಘಟನೆಗೆ ಸೇರಿಸಿದ್ದೇವೆ. ಕೊರೋನಾ ಸಂಕಷ್ಟ ಕಾಲದಲ್ಲಿ ಕೇಟರಿಂಗ್ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದೇವೆ. ನಾವೆಲ್ಲ ಒಗ್ಗಟ್ಟಾಗಿ ಇದ್ದಾಗ ಮಾತ್ರ ಎಲ್ಲವನ್ನು ಎದುರಿಸಲು ಸಾಧ್ಯ. ಇನ್ನು ಮುಂದಿನ ವರ್ಷಗಳಲ್ಲಿ ಸಂಘಟನೆ ಇನ್ನಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದೆ" ಎಂದು ಹೇಳಿದ್ದಾರೆ.
ಸಂಘದ ಅಧ್ಯಕ್ಷ ಸಂತೋಷ್ ಡಿಸೋಜ ಮಾತನಾಡಿ, "ನಾವು ನಮ್ಮ ಸಂಘಟನೆಗೆ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಮೂಲ್ಕಿ, ಮೂಡಬಿದ್ರೆ, ಸುರತ್ಕಲ್, ಕಿನ್ನಿಗೋಳಿ, ಬಜ್ಪೆ, ಕೈಕಂಬ, ತೊಕ್ಕೊಟ್ಟು ಭಾಗದ ಸುಮಾರು 60ರಷ್ಟು ಮಂದಿಯನ್ನು ಈಗಾಗಲೇ ಸಂಘಟನೆಗೆ ಸೇರಿಸಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಉಳಿದವರನ್ನೂ ಸಂಘಟನೆಗೆ ಸೇರಿಸಿಕೊಂಡು ಬಲಿಷ್ಠ ಸಂಘಟನೆ ಕಟ್ಟಲು ಸದಸ್ಯರು ನೆರವು ನೀಡಬೇಕು" ಎಂದು ಕರೆ ನೀಡಿದರು.
ನೂತನವಾಗಿ ಸೇರ್ಪಡೆಗೊಂಡ 26 ಮಂದಿ ಕೇಟರಿಂಗ್ ಮಾಲಕರಿಗೆ ಇದೇ ಸಂದರ್ಭದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.
ಕಳೆದ ತಿಂಗಳು ಸಂತ ಅಂತೋನಿ ಕೇಟರರ್ಸ್ ಬಂಟ್ವಾಳ ಇದರ ಪಿಕ್ ಅಪ್ ಅಪಘಾತಕ್ಕೀಡಾಗಿ ಇಬ್ಬರು ಯುವಕರು ಸಾವಿಗೀಡಾಗಿದ್ದು ಅವರ ಕುಟುಂಬಕ್ಕೆ ನೆರವಾಗುವ ನಿರ್ಧಾರದಂತೆ ಕೇಟರಿಂಗ್ ಮಾಲಕರು ಮತ್ತು ಹಿತೈಷಿಗಳ ನೆರವಿನಿಂದ ಸಂಗ್ರಹವಾದ 1 ಲಕ್ಷದ 26 ಸಾವಿರ ರೂಪಾಯಿಯನ್ನು ಇಬ್ಬರು ಯುವಕರ ಕುಟುಂಬಕ್ಕೆ ತಲಾ 63 ಸಾವಿರ ರೂ. ಮೊತ್ತದ ಚೆಕ್ ಅನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ವೇದಿಕೆಯಲ್ಲಿ ಅಧ್ಯಕ್ಷ ಸಂತೋಷ್ ಡಿಸೋಜ, ಗೌರವಾಧ್ಯಕ್ಷರಾದ ಸುಧಾಕರ್ ಕಾಮತ್, ಎಂ.ಎಸ್. ಇಕ್ಬಾಲ್, ವಿವಿಲ್ ಫಿಲಿಕ್ಸ್ ಲಸ್ರಾದೋ, ಉಪಾಧ್ಯಕ್ಷರಾದ ರಾಜಗೋಪಾಲ್ ರೈ, ಅನೀಸ್, ವಿದ್ಯಾಧರ್ ನಾಗ್ವೆಕರ್, ಕಾರ್ಯದರ್ಶಿ
ವಿಜಯ ಕುಮಾರ್, ಕೋಶಾಧಿಕಾರಿ ರಾಜೇಶ್, ಚಂದ್ರಶೇಖರ ಉಚ್ಚಿಲ್ ಮತ್ತಿತರರು ಉಪಸ್ಥಿತರಿದ್ದರು. ಸಭೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಕುಮಾರಿ ಲಾಸ್ಯ ಪ್ರಾರ್ಥಿಸಿದರು.