ಉಡುಪಿ, ಜ 12 (DaijiworldNews/AN): ಉಡುಪಿಯ ಕೋಟದಲ್ಲಿ ನಡೆದ ಪೋಲಿಸ್ ದೌರ್ಜನ್ಯ ಪ್ರಕರಣದಲ್ಲಿ ಕೊರಗ ಸಮುದಾಯದ ಮೇಲೆ ಪೊಲೀಸ್ ಕೇಸ್ ದಾಖಲು ಮಾಡಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ಜಾಥಾ ನಡೆಸಿ ಕೊರಗ ಸಮುದಾಯದ ಮೇಲೆ ದಾಖಲು ಮಾಡಿರುವ ಕೇಸ್ನ್ನು ಹಿಂಪಡೆಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಲಾಯಿತು.
ಮಣಿಪಾಲ ಸಿಂಡಿಕೇಟ್ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ, ಗೋಪಾಲ ಪೂಜಾರಿ ಮತ್ತು ಇತರ ಮುಖಂಡರು ಭಾಗವಹಿಸಿದ್ದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು, "ಕೊರಗ ಸಮುದಾಯವು ಅತ್ಯಂತ ಶಾಂತಿಯುತವಾಗಿ ಜೀವಿಸುವ ಸಮುದಾಯ. ಸಮಾಜ ಕಲ್ಯಾಣ ಸಚಿವರ ಊರಿನಲ್ಲಿಯೇ ಇಂತಹ ಘಟನೆ ನಡೆದಿರುವುದು ಉಡುಪಿ ಜಿಲ್ಲೆಗೆ ಕಳಂಕ ತರುವ ವಿಚಾರವಾಗಿದೆ. ಈ ಭಾಗದಲ್ಲಿ ಕಳೆದ ಕೆಲವೊಂದು ವರ್ಷಗಳಿಂದ ಹಲವಾರು ಪ್ರಕರಣಗಳು ಕಂಡು ಬಂದಿದ್ದು, ಸಚಿವರು ಈ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸುತ್ತೇವೆ ಎಂದಿದ್ದಾರೆ. ಆದರೆ ಸಿಒಡಿ ತನಿಖೆಯ ಮೂಲಕ ನ್ಯಾಯ ಸಿಗುವ ನಂಬಿಕೆ ಇಲ್ಲ" ಎಂದು ಹೇಳಿದರು.
"ಕೊರಗ ಸಮುದಾಯವು ತನ್ನ ಸಂಘಟನೆಯನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಈ ಸಮುದಾಯದಲ್ಲಿ ಕೇವಲ ಇಬ್ಬರು ಎಸ್ಎಸ್ಎಲ್ಸಿ ಓದಿರೋರು ಇದ್ದರು ಆದರೆ ಈಗ ಈ ಸಮುದಾಯದಲ್ಲಿ ಪದವೀಧರರು ಇದ್ದಾರೆ. ಸಮಾಜ ಇಂದು ಸಂಘಟಿತವಾಗಿದೆ. ಇಡೀ ರಾಜ್ಯಕ್ಕೆ ಮಾಡಿರುವ ಕೋವಿಡ್ ನಿಯಮ ಕೇವಲ ಕೊರಗ ಸಮುದಾಯಕ್ಕೆ ಮಾತ್ರ ಸೀಮಿತ ಎನ್ನುವ ರೀತಿಯಲ್ಲಿ ಪೊಲೀಸರು ದೌರ್ಬಲ್ಯವನ್ನು ನಡೆಸಿದ್ದಾರೆ. ಇದು ನಿಜಕ್ಕೂ ತಲೆತಗ್ಗಿಸುವ ವಿಚಾರ. ಇದರ ಕುರಿತು ಗಮನ ಹರಿಸಿದಾಗ ಸಮಾಜ ಕಲ್ಯಾಣ ಇಲಾಖೆ ಯಾಕಾಗಿ ಇದೆ ಎಂಬ ಪ್ರಶ್ನೆ ಮೂಡುತ್ತಿದೆ" ಎಂದರು.
"ಮಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿ ಕಪ್ಪು ವೇಷ ಹಾಕಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಕಾರಣಕ್ಕೆ ಆ ಇಡೀ ಪ್ರಕರಣವನ್ನು ಕೋಟತಟ್ಟು ಪ್ರಕರಣಕ್ಕೆ ವಿರುದ್ದವಾಗಿ ಎತ್ತಿ ಕಟ್ಟುವ ಪ್ರಯತ್ನ ಆಗುತ್ತಿದೆ. ಕೊರಗ ಸಮುದಾಯದ ಹೋರಾಟಗಾರರೇ ಈ ಕುರಿತು ಸ್ವಷ್ಟ ಪಡಿಸಿದ್ದರೂ ಕೂಡಾ ಬಿಜೆಪಿ ಈ ಪ್ರಕರಣವನ್ನು ಅಲ್ಪಸಂಖ್ಯಾತರ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ತಕ್ಷಣ ಎಫ್ಐಆರ್ನ್ನು ವಾಪಾಸ್ ಪಡೆದು ನ್ಯಾಂಯಾಗ ತನಿಖೆ ಆಗಬೇಕು" ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಗೋಪಾಲ ಪೂಜಾರಿ, "ಕೊರಗ ಸಮಾಜ ಯಾರ ಮೆಲೂ ದೌರ್ಜನ್ಯ ಮಾಡಿರುವ ಸಮಾಜ ಅಲ್ಲ. ತಮ್ಮ ಮದುವೆ ಸಂದರ್ಭದಲ್ಲಿ ಈ ಸಮುದಾಯ ಮೆಹಂದಿ ಕಾರ್ಯಕ್ರಮವನ್ನು ನಡೆಸುವುದೇ ಅಪರೂಪದ ವಿಷಯವಾಗಿದ್ದು. ಈ ಸಂದರ್ಭದಲ್ಲಿ ಬಿಜೆಪಿ ಕುಮ್ಮಕ್ಕಿನಿಂದ ಅಲ್ಲಿಗೆ ಹೋಗಿ ದೌರ್ಜನ್ಯ ನಡೆಸಿದ್ದಾರೆ. ಭೋವಿ ಸಮುದಾಯಕ್ಕೆ ಪ್ರಮಾಣ ಪತ್ರ ಸಿಗುವುದಕ್ಕಾಗಿ ನಾನೇ ಸ್ವತ, ಕೆಲಸ ಮಾಡಿದ್ದೇನೆ, ಕಾಂಗ್ರೆಸ್ ಸರಕಾರದಲ್ಲಿ ಭೋವಿ ಸಮುದಾಯಕ್ಕೆ ಸೂಕ್ತವಾಗಿ ಪ್ರಮಾಣ ಪತ್ರಗಳು ಸಿಗುತಿದ್ದವು. ಆದರೆ ಈಗ ಚುನಾವಣೆಗೆ ಒಂದು ವರ್ಷ ಇರುವ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖಾ ಸಚಿವರು ಫೈಲ್ ಕಳಿಸಿ ಪರಿಶೀಲನೆ ಮಾಡುತ್ತೇನೆ ಎಂದು ಹೇಳುವುದು ದುರದೃಷ್ಟಕರ" ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಹಾಗೂ ಮತ್ತಿತರರು ಉಪಸ್ಥಿತರಿದ್ದರು.