ಉಡುಪಿ, ಜ 12 (DaijiworldNews/HR): ಪೊಲೀಸರು ಹಾಗೂ ಗೋರಕ್ಷಕರ ಕಣ್ಣಿಗೆ ಮಣ್ಣೆರಚಲು ಖತರ್ನಾಕ್ ಪ್ಲ್ಯಾನ್ ಮಾಡಿ ಕೊನೆಗೆ ದನ ಕಳ್ಳರು ಸಿಕ್ಕಿಬಿದ್ದಿರುವ ಘಟನೆ ಕಾಪು ತಾಲೂಕಿನ ಶಿರ್ವ ಗ್ರಾಮದಲ್ಲಿ ನಡೆದಿದೆ.
ಪೊಲೀಸರ ಕೈಗೆ ಸಿಕ್ಕಿಬೀಳದಂತೆ ತರಕಾರಿ ವಾಹನ, ಓಮ್ನಿ , ಮಾರುತಿ ಕಾರ್ ಗಳಲ್ಲಿ ಹೀಗೆ ಸಾಗಿಸುತ್ತಿದ್ದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ಇದೀಗ ಅಕ್ರಮ ಗೋ ಸಾಗಾಟಕ್ಕೆ ಮದುವೆ ವಾಹನದ ಟಚ್ ನೀಡಿ ದಾರಿತಪ್ಪಿಸಲೆತ್ನಿಸಿದ್ದು, ಸುಮಾರು 16 ದನಗಳನ್ನು ಸಾಗಾಟ ಮಾಡಲು ಮುಂದಾಗಿ ಸಿಕ್ಕಿಬಿದ್ದಿದ್ದಾರೆ.
ಪೊಲೀಸರ ಕೈಗೆ ಸಿಕ್ಕಿಬೀಳದಂತೆ ಎಚ್ಚರಿಕೆ ವಹಿಸಿದ್ದ ಖದೀಮರು ,ಇನ್ನೋವಾ ಕಾರಿಗೆ ಮದುವೆ ವಾಹನದಂತೆ ಸಿಂಗರಿಸಿ, ದಾರಿ ತಪ್ಪಿಸಲೆತ್ನಿಸಿ ಅದರ ಹಿಂದೆ ಪಿಕಪ್ ವಾಹನದಲ್ಲಿ ದನಗಳನ್ನು ಸಾಗಾಟ ಮಾಡುತ್ತಿದ್ದರು. ಆದರೆ ಅನುಮಾನ ಬಂದು ಶಿರ್ವ ವ್ಯಾಪ್ತಿಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದ ವೇಳೆ ಗೋ ಕಳ್ಳರ ಅಕ್ರಮ ತಂತ್ರ ಬೆಳಕಿಗೆ ಬಂದಿದೆ.
ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪಿಕಪ್ ವಾಹನದಲ್ಲಿದ್ದ ಸಾಗಿಸುತ್ತಿದ್ದ ಒಟ್ಟು 16 ದನಗಳ ಪೈಕಿ 2 ದನಗಳು ಸಾವನ್ನಪ್ಪಿದ್ದು ನಾಲ್ಕು ದನಗಳಿಗೆ ಗಾಯಗೊಂಡಿದೆ ಎಂದು ತಿಳಿದು ಬಂದಿದೆ. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆ ಬೆಳಕಿಗೆ ಬಂದಾಕ್ಷಣ ಜಾನುವಾರು ಸಾಗಾಟದ ಖತರ್ನಾಕ್ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.